

ರಾಯಚೂರು ಸ್ವಚ್ಛ ಭಾರತ ಮಿಷನ್ ಹಾಗೂ ರಾಯಚೂರು ಉತ್ಸವದ ನಿಮಿತ್ತ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ಸೋಮವಾರ ಆಯೋಜನೆ ಮಾಡಲಾಗಿದ್ದ ಸ್ವಚ್ಛತಾ ಓಟಕ್ಕೆ ಸಂಸದ ಜಿ.ಕುಮಾರ ನಾಯಕ ಚಾಲನೆ ನೀಡಿದರು.
ನಂತರ ಮಾತನಾಡಿ, ಸ್ವಾಮಿ ವಿವೇಕಾನಂದರ ಮೌಲ್ಯಗಳು, ಸದೃಢ ಶರೀರ ಮತ್ತು ಮನಸ್ಸಿನ ಮಹತ್ವ ಮತ್ತು ಸ್ವಚ್ಛ, ಆರೋಗ್ಯಕರ ವಾತಾವರಣ ನೆನಪಿಸಿದರು. ರಾಯಚೂರು ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಮ್ಯಾರಥಾನ್ ಓಟಕ್ಕೆ ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದು ಮಹತ್ವದ ಸಾಧನೆಯಾಗಿದೆ.
ಈ ಸ್ವಚ್ಛತಾ ಓಟವು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು, ಪರಿಸರ ಸಂರಕ್ಷಣೆ, ಆರೋಗ್ಯಕರ ಜೀವನ ಶೈಲಿ ಹಾಗೂ ಪಾಲಿಕೆಯೊಂದಿಗೆ ನಾಗರಿಕರ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದೆ.
ಕಾರ್ಯಕ್ರಮಕ್ಕೆ ದೊರೆತ ವ್ಯಾಪಕ ಜನಬೆಂಬಲಕ್ಕೆ ಸಾರ್ವಜನಿಕರು ಸರ್ಕಾರ ಹಾಗೂ ಮಹಾನಗರ ಪಾಲಿಕೆಯ ಈ ಮಹತ್ವದ ಮುಂದಾಳತ್ವಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸ್ವಚ್ಛತಾ ಓಟದಲ್ಲಿ 3000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಿಂದ- 65ರ ವಯೋಮಾನದವರು ಓಟದಲ್ಲಿ ಕಂಡು ಬಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ., ಪಾಲಿಕೆ ಆಯುಕ್ತ ಜುಬಿನ್‌ಮೊಹಪಾತ್ರ, ಎಸ್ಪಿ ಅರುಣಾಂಕ್ಷು ಗಿರಿ, ಎಡಿಸಿ ಶಿವಾನಂದ, ಕೃಷ್ಣ ಶಾಂವತಗೇರಿ, ಪುಲಮ್ ಸಿಂಗ್, ಉಪ ಆಯುಕ್ತ ಸಂತೋಷ ರಾಣಿ, ಎಸಿ ಡಾ.ಹಂಪಣ್ಣ ಸಜ್ಜನ್, ತಹಸೀಲ್ದಾರರಾದ ಸುರೇಶ್ ವರ್ಮ, ಅಮರೇಶ ಬಿರಾದಾರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಸೇರಿ ಅನೇಕರು ಇದ್ದರು.