

ಮೊದಲನೇ ದಿನ ಚೀನಾದ ಗೈರೂಂಗ್ ಎಂಬ ಚಿಕ್ಕ ಹಾಗೂ ಚೊಕ್ಕ ಪಟ್ಟಣವನ್ನು ತಲುಪಿ ಅಲ್ಲಿಯೇ ವಾಸ್ತವ್ಯ ಹೂಡಿದೆವು. ಜೂ. 26ರಂದು ಮಧ್ಯಾಹ್ನ ಹೊರಟು 200 ಕಿ.ಮೀ. ದೂರದ ಸಾಗಾ ಪಟ್ಟಣ ತಲುಪಿದೆವು. ಮಾರ್ಗ ಮಧ್ಯದಲ್ಲಿರುವ ಭಿನ್ನ ಭಿನ್ನ ಬಣ್ಣದ ವಿಭಿನ್ನ ಪರ್ವತಗಳು, ಹಿಮಾಚ್ಛಾದಿತ ಎತ್ತರದ ಗುಡ್ಡಗಳು, ಅಂಕುಡೊಂಕಾದ ಆಯಾಸಪೂರ್ಣವಾದ ಹಾದಿಯನ್ನು ಸುಗಮಗೊಳಿಸಿದವು. ಸಾಗಾ ನಗರವು ಎತ್ತರದ ಪ್ರದೇಶದಲ್ಲಿದ್ದು, ನಮಗೆ ಅರಿವಿಲ್ಲದಂತೆ ಆಮ್ಲಜನಕದ ಕೊರತೆ ಹಾಗೂ ಆ ಕಾರಣದಿಂದ ಆರೋಗ್ಯದಲ್ಲಿ ತೊಂದರೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಮಾನಸ ಸರೋವರದ ವಾತಾವರಣಕ್ಕೆ ನಮ್ಮ ದೇಹಾರೋಗ್ಯ ಹೊಂದಿಕೊಳ್ಳುತ್ತದೋ ಇಲ್ಲವೋ ಎಂಬುದರ ಪರೀಕ್ಷೆ ಇಲ್ಲಿಂದಲೇ ಆರಂಭವಾಗುತ್ತದೆ. ರಾತ್ರಿ ಮಲಗಿದಾಗ ಕಿಟಕಿ, ಬಾಗಿಲುಗಳನ್ನು ಮುಚ್ಚಿದರೆ ಆಮ್ಲಜನಕದ ಕೊರತೆ, ತೆಗೆದರೆ ಮೈ ಕೊರೆಯುವ ಚಳಿ. ಅಂತೂ ಹರಸಾಹಸ ಮಾಡಿ ಇರುಳು ಕಳೆದೆವು.