ಕೇರಳಂ, ಕರ್ನಾಟಕಕ್ಕೆ ಮುಂಗಾರು ಪ್ರವೇಶ: ರಾಜ್ಯದಲ್ಲಿ 6 ದಿನ ಜೋರು ಮಳೆ- southwest monsoon officially entered

 ಕೇರಳಂ, ಕರ್ನಾಟಕದ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶ
ಕೇರಳಂ, ಕರ್ನಾಟಕದ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶ
Published on
ಬೆಂಗಳೂರು: ಕೇರಳಂ ಮತ್ತು ಕರ್ನಾಟಕದ ಕರಾವಳಿ ಭಾಗಕ್ಕೆ ಗುರುವಾರ ನೈಋತ್ಯ ಮಾನ್ಸೂನ್ (ಮುಂಗಾರು) ಪ್ರವೇಶಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ತಂದಿದೆ. ಮುಂಗಾರು ಆಗಮನ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 6 ದಿನ ಜೋರಾಗಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕೇರಳಕ್ಕೆ ಆಗಮಿಸಿದ್ದ ಮಾನ್ಸೂನ್ ಮಾರುತಗಳು ಪ್ರಬಲವಾದ ಕಾರಣ ಅದೇ ದಿನದಂದು ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗಕ್ಕೆ ಬಂದಿವೆ.ಮುಂದಿನ ದಿನಗಳಲ್ಲಿ ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರ ಸೇರಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮಾರುತಗಳು ವ್ಯಾಪಿಸಲು ವಾತಾವರಣ ಅನುಕೂಲಕರವಾಗಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ, ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ‘ಸೂಪರ್ ಎಲ್‌ನಿನೋ’ ಮುಂಗಾರಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಮಳೆ ಆತಂಕ ಎದುರಾಗಿದೆ. ಕರಾವಳಿ,ಮಲೆನಾಡು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವ ಇದೆ ಎಂದಿದೆ. ಒಟ್ಟು ಮಳೆ ಪ್ರಮಾಣದಲ್ಲಿ ಶೇ.75 ಮಳೆಯು ಮುಂಗಾರಿನ ಅವಧಿಯಲ್ಲಿ ಸುರಿಯಲಿದೆ. ಆದರೆ, ಈ ಬಾರಿ ನೈಋತ್ಯ ಮಾನ್ಸೂನ್ ಮೇಲೆ ‘ಎಲ್ ನಿನೋ’ ಪ್ರಭಾವದಿಂದ ಅಧಿಕ ತಾಪಮಾನ ಮತ್ತು ಮಳೆ ಕುಂಠಿತ ಉಂಟಾಗಲಿದೆ. ಹಿಂದೂ ಮಹಾಸಾಗರದ ದ್ವಿಗುಣ ಪ್ರಭಾವವು ಸಕಾರಾತ್ಮಕವಾಗಿದ್ದರೆ ‘ಎಲ್ ನಿನೊ’ ಪರಿಣಾಮ ಸ್ವಲ್ಪ ಮಟ್ಟಿಗೆ ತಗ್ಗಬಹುದು ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
852 ಮಿಮೀಗಿಂತ ಕಡಿಮೆ ಮಳೆ:
ಜೂ.1ರಿಂದ ಸೆ.30ರವರೆಗೆ ವಾಡಿಕೆಯಂತೆ 852 ಮಿಮೀ ಮಳೆಯಾಗಬೇಕು. ಮುಂಗಾರು ಅವಧಿ ಚೆನ್ನಾಗಿದ್ದರೆ ಮಾತ್ರ ಉತ್ತಮ ಮಳೆಯಾಗುತ್ತದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ವ್ಯಾಪ್ತಿಯ ಕರಾವಳಿಯಲ್ಲಿ ವಾಡಿಕೆಗಿಂತ 3,101 ಮಿಮೀ ಅಧಿಕವಾಗಿ ಸುರಿಯಬೇಕು. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಒಟ್ಟು 1,556 ಮಿಮೀ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದಲ್ಲಿ ಒಟ್ಟು 369 ಮಿಮೀ ಮಳೆಯಾಗಬೇಕು. ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಸೇರಿ ಒಟ್ಟು ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟು 479 ಮಿಮೀ ಮಿಮೀಗೂ ಅಧಿಕ ವರ್ಷಧಾರೆಯಾಗಬೇಕು. ಈ ಬಾರಿ ಮುಂಗಾರಿನ ಅವಧಿಯಲ್ಲಿ ಮಳೆ ಕೊರತೆ ಎದುರಾಗಿದೆ.
ಜುಲೈನಲ್ಲಿ ‘ಎಲ್ ನಿನೋ ’ ಆರಂಭ:
ಪೆಸಿಫಿಕ್ ಸಾಗರದಲ್ಲಿ ಪ್ರಸ್ತುತ ‘ಲಾ-ನಿನಾ’ ಸ್ಥಿತಿ ಇದೆ. ಆದರೆ, ಜುಲೈ ವೇಳೆಗೆ ಇದು ‘ಎಲ್ ನಿನೋ’ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಈ ಬದಲಾವಣೆಯು ಮುಂಗಾರು ಮಳೆ ಮೇಲೆ ನೇರ ಪರಿಣಾಮ ಬೀರಲಿದೆ. ಜೂನ್, ಜುಲೈನಲ್ಲಿ ವಾಡಿಕೆಯಷ್ಟೇ ಮಳೆಯಾದರೆ, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ.
ಏನಿದು ಎಲ್ ನಿನೋ ಮತ್ತು ಲಾ-ನಿನಾ?
ಪ್ರತಿ ವರ್ಷ‘ಎಲ್ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮೇರೆಗೆ ಮುಂಗಾರು ಮಳೆ ಮೇಲೆ ಪರಿಣಾಮ ಬೀರುತ್ತದೆ. ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿ.ಸೆ.ನಿಂದ 1.5 ಡಿ.ಸೆ.ವರೆಗೆ ಹೆಚ್ಚು ದಾಖಲಾದರೆ ‘ಎಲ್ ನಿನೋ’ ಉಂಟಾಗುತ್ತದೆ.ಫೆಸಿಫಿಕ್ ಸಮುದ್ರದ ಪಶ್ಚಿಮ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ ‘ಲಾ-ನಿನಾ’ ಎಂದು ಕರೆಯಲಾಗುತ್ತಿದೆ.
ಮಾನ್ಸೂನ್ ಆಗಮನ ವಿವರ:
ವರ್ಷ ದಿನಾಂಕ
2018 ಮೇ 29
2019 ಜೂ 8
2020 ಜೂ 1
2021 ಜೂ 3
2022 ಮೇ 29
2023 ಜೂ 9
2024 ಜೂ 2
2025 ಮೇ 24
2026 ಜೂ 4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net