ನದಿಮೂಲದಿಂದ ಕೆರೆ ತುಂಬಿಸಲು ಶಾಸಕರು ವಿಫಲ

 ಗುಂಡ್ಲುಪೇಟೆಯಲ್ಲಿ ನಿರಂಜನಕುಮಾರ್ ಮಾತನಾಡಿದರು. ಪಕ್ಷದ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಮೂಡ್ಲು, ಮಹೇಂದ್ರ ಇದ್ದರು.
ಗುಂಡ್ಲುಪೇಟೆಯಲ್ಲಿ ನಿರಂಜನಕುಮಾರ್ ಮಾತನಾಡಿದರು. ಪಕ್ಷದ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಮೂಡ್ಲು, ಮಹೇಂದ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್
  • ಕೆರೆಗಳಿಗೆ ನೀರು ತುಂಬಿಸುವ ವಿಷಯದಲ್ಲಿ ವಿಫಲರಾಗಿರುವ ಶಾಸಕ ಗಣೇಶ್ ಪ್ರಸಾದ್
ಗುಂಡ್ಲುಪೇಟೆ: ಕೆರೆಗಳಿಗೆ ನೀರು ತುಂಬಿಸುವ ವಿಷಯದಲ್ಲಿ ವಿಫಲರಾಗಿರುವ ಶಾಸಕ ಗಣೇಶ್ ಪ್ರಸಾದ್ ಅವರ ದುರಾಡಳಿತದಿಂದ ತಾಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಗಣೇಶ್ ಪ್ರಸಾದ್ ಶಾಸಕರಾದ ನಂತರ ಒಮ್ಮೆಯೂ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸಿಲ್ಲ. ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ತಾಲೂಕಿನ ರೈತರು ಸುಮಾರು 45 ದಿನ ಬೀದಿಗಿಳಿದು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದರು. ವಿಪಕ್ಷ ನಾಯಕ ಆರ್.ಅಶೋಕ್, ಮೈಸೂರು ಸಂಸದ ಯದುವೀರ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಅವರನ್ನು ಕರೆಸಿ ಪಾದಯಾತ್ರೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರೈತರನ್ನು ಭೇಟಿ ಮಾಡಿದ ಶಾಸಕರು ತಾಂತ್ರಿಕ ಕಾರಣದಿಂದ ನೀರು ಹರಿಸಲು ಸಾಧ್ಯವಾಗಿಲ್ಲ. ಎರಡು ತಿಂಗಳಲ್ಲಿ ಎಲ್ಲ ಕೆರೆಗಳಿಗೂ ನೀರು ತುಂಬಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕೆರೆಗಳು ಬತ್ತಿವೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದು ರೈತರು ಬೆಳೆ ಬೆಳೆಯಲಾಗದಂತಾಗಿದೆ. ಈಗಾಗಲೇ ಲಕ್ಷಾಂತರ ರೂ. ಸಾಲ ಮಾಡಿ ಬೆಳೆದಿದ್ದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಂತಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ನಮ್ಮ ಅವಧಿಯಲ್ಲಿ ನಿರಂತರವಾಗಿ ಕೆರೆಗಳಿಗೆ ನೀರು ಹರಿಸಿದ್ದರಿಂದ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಹರಿದಿತ್ತು. ಹಳ್ಳಕೊಳ್ಳಗಳಲ್ಲಿ ನೀರು ಹರಿದು ಸಮೃದ್ಧಿಯಾಗಿತ್ತು. ಆದರೆ, ಮೂರು ವರ್ಷದಿಂದ ನೀರು ಹರಿಸದ ಪರಿಣಾಮ ಭೂಮಟ್ಟಕ್ಕೆ ಬಂದಿದ್ದ ಅಂತರ್ಜಲಮಟ್ಟ ಪಾತಾಳಕ್ಕಿಳಿಯುತ್ತಿದೆ. ಸದ್ಯ ಮಳೆಯೂ ಬೀಳದೆ ಡ್ಯಾಂಗಳಲ್ಲಿ ನೀರು ಖಾಲಿಯಾಗಿದ್ದು ಕೆರೆಗಳನ್ನು ತುಂಬಿಸಲು ಸಾಧ್ಯವೇ ಇಲ್ಲದಂತಾಗಿದೆ. ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, 15 ದಿನಗಳಾದರೂ ಮನೆಗಳಿಗೆ ನೀರು ಸರಬರಾಜು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಣೇಶ್ ಪ್ರಸಾದ್ ಕರ್ತವ್ಯ ಮರೆತಿದ್ದರಿಂದ ಅಧಿಕಾರಿಗಳು ಇಷ್ಟಬಂದಂತೆ ಕೆಲಸ ಮಾಡುತ್ತಿದ್ದಾರೆ. ಲಂಚಕೊಡದೆ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಕೇರಳಕ್ಕೆ ಪ್ರತಿ ದಿನ 300 ಟಿಪ್ಪರ್‌ಗಳಲ್ಲಿ ಕಲ್ಲು ಹಾಗೂ ಮಣ್ಣು ಸಾಗಣೆ ನಡೆಯುತ್ತಿದೆ. ಗಾಂಜಾ ಹಾಗೂ ಕೇರಳದ ಲಾಟರಿಗಳ ಮಾರಾಟಕ್ಕೆ ಎಗ್ಗಿಲ್ಲದಂತಾಗಿದೆ. ಅನ್ನಭಾಗ್ಯ ಅಕ್ಕಿಯ ಕಳ್ಳಸಾಗಾಣಿಕೆ ಮಾಡುವವರನ್ನು ಜನರೇ ಹಿಡಿದುಕೊಟ್ಟರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಸಿವುಮುಕ್ತರನ್ನಾಗಿಸಲು ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ ತಲಾ 5 ಕೆಜಿಯಂತೆ ಅಕ್ಕಿ ನೀಡಿದರೂ ರಾಜ್ಯ ಸರ್ಕಾರ ಕೇವಲ 4 ಕೆಜಿ ಕೊಡುವ ಮೂಲಕ ಜನರನ್ನು ವಂಚಿಸುತ್ತಿದೆ ಎಂದು ದೂರಿದರು.
ಕೆರೆ ತುಂಬಿಸುವಲ್ಲೂ ಸ್ವಾರ್ಥ: ಕ್ವಾರಿಗೆ ಹೋಗಲು ಸರ್ಕಾರಿ ಅನುದಾನದಲ್ಲಿ ಡಾಂಬರು ರಸ್ತೆ ನಿರ್ಮಿಸಿರುವ ಶಾಸಕರು ಜಮೀನಿಗೆ ಅನುಕೂಲವಾಗುವಂತೆ ಕಮರಹಳ್ಳಿ ಕೆರೆ ಮಾತ್ರ ತುಂಬಿಸಿಕೊಂಡಿದ್ದಾರೆ. ಕುಟುಂಬದ ಟ್ರಸ್ಟ್ ಹೆಸರಿನಲ್ಲಿ ಕಟ್ಟಡ, ಪುರಸಭೆ ಸ್ಥಳದಲ್ಲಿ ಸಂಬಂಧಿಕರ ಹೋಟೆಲ್ ನಿರ್ಮಿಸಿಕೊಂಡು ಅಧಿಕಾರವನ್ನು ಸ್ವಾರ್ಥಕ್ಕೆ ಬಳಕೆ ಮಾಡುತ್ತಿದ್ದಾರೆ. ಇನ್ನಾದರೂ ಶಾಸಕರು ಜವಾಬ್ದಾರಿಯಿಂದ ಕೆಲಸಮಾಡಬೇಕು. ಇಲ್ಲದಿದ್ದರೆ ಜನತೆಯ ಶಾಪಕ್ಕೆ ಗುರಿಯಾಗುತ್ತೀರಿ ಎಂದು ನಿರಂಜನಕುಮಾರ್ ಎಚ್ಚರಿಕೆ ನೀಡಿದರು.
ಮುಖಂಡರಾದ ಎಸ್.ನಾಗೇಂದ್ರ, ಡಾ.ನವೀನ್ ಮೌರ್ಯ, ಕಣ್ಣೇಗಾಲಸ್ವಾಮಿ, ಎಸ್.ಎಂ.ಮಲ್ಲಿಕಾರ್ಜುನ, ನಾಗೇಶ್, ಗೋವಿಂದು ಕಬ್ಬಹಳ್ಳಿ ರೇವಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net