ಶಾಸಕ ಧೀರಜ್ ಮುನಿರಾಜು ಮಧ್ಯಂತರ ಪ್ರಗತಿ ವರದಿ ನೀಡಲಿ / DODABALLAPUR
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಘಟಕದ ಜಿಲ್ಲಾ ಅಧ್ಯಕ್ಷ ಶರತ್ ಪಟೇಲ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪುನೀತ್, ಎನ್.ಎಸ್.ಯು.ಐ ಅಧ್ಯಕ್ಷ ಅಶ್ವತ್ಥ ರೆಡ್ಡಿ, ಯುವ ಘಟಕದ ಮುಖಂಡರಾದ ಶಿವಕುಮಾರ್, ಜಯಸಿಂಹ ಇತರರು ಇದ್ದರು.
ದೊಡ್ಡಬಳ್ಳಾಪುರ : ಐದು ವರ್ಷದ ಪ್ರೋಗ್ರೆಸ್ ಕಾರ್ಡ್ನೊಂದಿಗೆ ಬರುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜು ಈ ಹಿಂದೆ ಹೇಳಿದ್ದರು. ಆದರೆ 3 ವರ್ಷವಾಗಿದರೂ ಈವರೆಗಿನ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಅನ್ನು ಶಾಸಕರು ನೀಡಲಿ ಎಂದು ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಶರತ್ ಪಟೇಲ್ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಅಭಿವೃದ್ಧಿಯ ರಿಪೋರ್ಟ್ ಕೇಳುತ್ತಿದ್ದಾರೆ. ಭರವಸೆ ನೀಡಿದ್ದ ನವ ದೊಡ್ಡಬಳ್ಳಾಪುರದ ಕಾರ್ಯವೈಖರಿ ಎಲ್ಲಿದೆ?. ಅಮೆರಿಕಾದಲ್ಲಿ ಓದಿದವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ?. ಟೇಬಲ್ ಕುಟ್ಟಿ ಅನುದಾನ ತರುವುದಾಗಿ ಹೇಳಿದ್ದವರು ಈಗ ಎಲ್ಲಿ ಟೇಬಲ್ ಕುಟ್ಟುತ್ತಿದ್ದಾರೆ?. ಇದಕ್ಕೆಲ್ಲ ಶಾಸಕರು ಉತ್ತರಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಯುವ ಘಟಕದಿಂದ ಶೀಘ್ರ ಶಾಸಕರ ಕಚೇರಿಗೆ ಬರುತ್ತೇವೆ. 5 ವರ್ಷದ ರಿಪೋರ್ಟ್ ಕಾರ್ಡ್ ಆಮೇಲೆ ನೀಡಬಹುದು. ಈಗ ಅರ್ಧ ಅವಧಿಯೂ ಮುಗಿದಿದ್ದು, ಮಧ್ಯಂತರ ರಿಪೋರ್ಟ್ ಕಾರ್ಡ್ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಯುವಘಟಕದ ತಾಲೂಕು ಅಧ್ಯಕ್ಷ ಪುನೀತ್ ಗೌಡ ಮಾತನಾಡಿ, ಜಿಲ್ಲಾಸ್ಪತ್ರೆ, ಜಿಲ್ಲಾ ಕ್ರೀಡಾಂಗಣ ದೊಡ್ಡಬಳ್ಳಾಪುರದಲ್ಲಿ ಉಳಿಸಲು ಹೋರಾಟ ಮಾಡಿದ್ದು ಟಿ.ವೆಂಕಟರಮಣಯ್ಯ ಅವರು. ರಾಜ್ಯದಲ್ಲಿ ಬಿಜೆಪಿ ಇದ್ದಾಗ ಪ್ರತಿ ಸಚಿವ ಸಂಪುಟ ಸಭೆಯಲ್ಲೂ ದೊಡ್ಡಬಳ್ಳಾಪುರ ಜಿಲ್ಲಾಸ್ಪತ್ರೆ ಮುಂದೂಡಿಕೊಂಡು ಬರಲಾಗುತ್ತಿತ್ತು. ಬಿಜೆಪಿ ಇದ್ದರೂ ಸಚಿವರ ಮನೆ ಬಾಗಿಲಿಗೆ ತೆರಳಿ ಜಿಲ್ಲಾಸ್ಪತ್ರೆಗಾಗಿ ವೆಂಕಟರಮಣಯ್ಯ ಅವರು ಪ್ರಯತ್ನಿಸಿದರು. ಇದರಿಂದ ಜಿಲ್ಲಾಸ್ಪತ್ರೆ ತಾಲೂಕಿಗೆ ಮಂಜೂರಾಗಿತ್ತು. ಆದರೆ ಜಿಲ್ಲಾಸ್ಪತ್ರೆ ನಿಮಾರ್ಣಕ್ಕೆ ಈಗಿನ ಶಾಸಕರು ಯಾವುದೇ ಪ್ರಯತ್ನ ಮಾಡಿಲ್ಲ. ಯಾವುದೇ ಸಚಿವರನ್ನೂ ಭೇಟಿ ಮಾಡಿಲ್ಲ. ಯಾವಾಗ ಕೇಳಿದರು ಪತ್ರ ಬರೆದಿದ್ದೇನೆ ಎನ್ನುತ್ತಾರೆ. ನವ ದೊಡ್ಡಬಳ್ಳಾಪುರದ ಹೆಸರಿನಲ್ಲಿ ಚುನಾವಣೆಯಲ್ಲಿ ಗೆದ್ದ ಶಾಸಕರು ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರೂ ಅವರ ಕಣ್ಣಿಗೆ ಕಾಣುತ್ತಿಲ್ಲ. ನಗರಸಭೆಯಲ್ಲಿ ಅವರ ಪಕ್ಷವೇ ಅಧಿಕಾರದಲ್ಲಿದೆ. ಆದರೂ ನಗರದಲ್ಲಿ ಸೌಕರ್ಯಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಂಕುಸ್ಥಾಪನೆ, ಭೂಮಿ ಪೂಜೆಯೇ ಅಭಿವೃದ್ಧಿಯೇ : ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆ ಸೀರೆಗಳ ಮಾರಾಟ ಮಳಿಗೆ ನಿರ್ಮಿಸಲು 10 ಗುಂಟೆ ಜಾಗವನ್ನು ಮಾಜಿ ಶಾಸಕ ವೆಂಕಟರಮಣಯ್ಯ ಮಂಜೂರು ಮಾಡಿಸಿದ್ದರು. ಪೈಪೋಟಿಯಲ್ಲಿ ಮಳಿಗೆಯ ಭೂಮಿ ಪೂಜೆ ಎರಡೆರಡು ಬಾರಿ ನಡೆದರೂ ಇನ್ನೂ ಕೆಲಸ ಆರಂಭವಾಗಿಲ್ಲ. ಶಂಕುಸ್ಥಾಪನೆ, ಭೂಮಿ ಪೂಜೆ ಅಭಿವೃದ್ಧಿಯೇ?. ಈ ರೀತಿ ಆಗಬಾರದೆಂಬ ಕಾರಣಕ್ಕೆ ಬಾಶೆಟ್ಟಿಹಳ್ಳಿಯಲ್ಲಿ ಕೆಂಪೇಗೌಡ ಪುತ್ಥಳಿ ಶಂಕುಸ್ಥಾಪನೆಗೆ ಸಾರ್ವಜನಿಕರು ಆಕ್ಷೇಪಿಸಿದ್ದರು. ಈ ಬಗ್ಗೆ ಪಪಂ ಅಧ್ಯಕ್ಷರು 3 ತಿಂಗಳಲ್ಲಿ ಪುತ್ಥಳಿ ನಿರ್ಮಿಸುವುದಾಗಿ ಹೇಳಿದ್ದಾರೆ. ತಾಂತ್ರಿಕ ಇಲಾಖೆಯಿಂದ ಅನುಮತಿ ಪಡೆಯುತ್ತೇವೆ ಎಂದಿದ್ದಾರೆ. ಅದನ್ನು ತೆಗೆದುಕೊಂಡೇ ಭೂಮಿ ಪೂಜೆ ಮಾಡಬಹುದಿತ್ತಲ್ವೇ ಎಂದು ಪುನೀತ್ ಗೌಡ ಪ್ರಶ್ನಿಸಿದರು.
ಜೆಡಿಎಸ್ನವರದು ಹಿಟ್ ಆ್ಯಂಡ್ ರನ್ : ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರ ಪಕ್ಷ ಕೇವಲ ಅವರ ಕುಟುಂಬಕ್ಕಾಗಿ. ಅಪ್ಪ ಒಂದು ಹೇಳಿಕೆ ನೀಡಿದರೆ ಮಗ ಮತ್ತೊಂದು ಹೇಳಿಕೆ ನೀಡುತ್ತಾರೆ. ಕುಮಾರಸ್ವಾಮಿ ಅವರದು ಕೇವಲ ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳುವ ಹೋರಾಟ. ತಾಲೂಕಿನ ಬಾಶೆಟ್ಟಿಹಳ್ಳಿ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಉಳಿಸಿಕೊಳ್ಳಲಾಗದವರು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವುದು ಬೇಡ ಎಂದು ಶರತ್ ಪಟೇಲ್ ಟಾಂಗ್ ನೀಡಿದರು.
ಕಾಂಗ್ರೆಸ್ ಕಾರ್ಯಕರ್ತರೇ ಅಭ್ಯರ್ಥಿ : 2028ರ ಚುನಾವಣೆಗೆ ಅಭ್ಯರ್ಥಿ ಯಾರು ? ಎಂಬ ಮಾಧ್ಯಮದವರ ಪ್ರಶ್ನೆಗೆ ಕಾಂಗ್ರೆಸ್ನಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಅಭ್ಯರ್ಥಿಯೇ.. ಕ್ಷೇತ್ರದಲ್ಲಿ ಸಾಕಷ್ಟು ಅಭ್ಯರ್ಥಿಗಳಿದ್ದಾರೆ. ಹೊರಗಡೆಯಿಂದ ತಾಲೂಕಿಗೆ ಬರುವ ಅವಶ್ಯಕತೆ ಇಲ್ಲ. ದೊಡ್ಡಬಳ್ಳಾಪುರದಲ್ಲೇ ಬಲಿಷ್ಠ, ಸೂಕ್ತವಾದವರು ಇದ್ದಾರೆ. ಪಕ್ಷ ಯಾರನ್ನೇ ಗುರುತಿಸಿದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಶರತ್ ಪಟೇಲ್ ಉತ್ತರಿಸಿದರು.