ಔಷಧ ಮಳಿಗೆಗಳ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

Medical Store
Medical Store
Published on

ಪ್ರಮುಖ ಮುಖ್ಯಾಂಶಗಳು

  • * ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ದೇಶದಾದ್ಯಂತ ಔಷಧ ಮಳಿಗೆಗಳ ಬಂದ್‌ಗೆ ಕರೆ
  • * ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧ ಮಳಿಗೆಗಳು ಎಂದಿನಂತೆ ಕಾರ್ಯ
ಬೆಂಗಳೂರು: ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ದೇಶದಾದ್ಯಂತ ಔಷಧ ಮಳಿಗೆಗಳನ್ನು ಬುಧವಾರ (ಮೇ 20) ಬಂದ್ ಮಾಡುವಂತೆ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (ಎಐಒಸಿಡಿ) ನೀಡಿರುವ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರ್ನಾಟಕ ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಮಳಿಗೆಗಳನ್ನು ಮುಚ್ಚದೆ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವಂತೆ ಔಷಧ ವ್ಯಾಪಾರಿಗಳಿಗೆ ಸೂಚಿಸಿದೆ. ಆದರೆ ಬೆಂಗಳೂರು ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ ಔಷಧ ಮಳಿಗೆಗಳನ್ನು ಬಂದ್ ಮಾಡುವುದಾಗಿ ತಿಳಿಸಿದೆ.
ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ ದೇಶಾದ್ಯಂತ 12.40 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತದೆ. ರಾಜ್ಯದಲ್ಲಿ 45 ಸಾವಿರ ಚಿಲ್ಲರೆ ಔಷಧ ವ್ಯಾಪಾರಿಗಳಿದ್ದಾರೆ.ಇವರಲ್ಲಿ ಕೆಲವರು ಮಾತ್ರವೇ ಬಂದ್ ಮಾಡಲು ನಿರ್ಧರಿಸಿದ್ದು, ಬಹುತೇಕರು ಎಂದಿನಂತೆ ಮಳಿಗೆಗಳನ್ನು ತೆರೆದು ಔಷಧ ಮಾರಾಟ ಮಾಡಲಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧ ಮಳಿಗೆಗಳು ಕಾರ್ಯನಿರ್ವಹಿಸಲಿವೆ.

ಔಷಧ ವ್ಯಾಪಾರಿಗಳೊಂದಿಗೆ ಸಭೆ:

ದೇಶಾದ್ಯಂತ ಔಷಧ ಮಳಿಗೆಗಳ ಬಂದ್ ಕರೆ ಹಿನ್ನೆಲೆಯಲ್ಲಿ, ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ ಅವರು ಔಷಧ ವ್ಯಾಪಾರಿಗಳ ಜತೆಗೆ ಸಭೆ ನಡೆಸಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜೀವರಕ್ಷಕ ಔಷಧಗಳು ಜನರಿಗೆ ಸಕಾಲದಲ್ಲಿ ದೊರೆಯುವಂತೆ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ ಆವರಣದಲ್ಲಿನ ಔಷಧ ಮಳಿಗೆಗಳನ್ನು ಎಂದಿನಂತೆ ತೆರೆದು ಸೇವೆ ಒದಗಿಸುವಂತೆ ಮನವಿ ಮಾಡಿದ್ದರು. ಜತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವರಕ್ಷಕ ಔಷಧಗಳ ಕೊರತೆ ಆಗದಂತೆ ಕ್ರಮವಹಿಸಲು ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಿಯಾಯಿತಿಗೆ ವಿರೋಧ:

ಆನ್‌ಲೈನ್ ಔಷಧ ಮಾರಾಟ ಹಾಗೂ ಇ-ಫಾರ್ಮಸಿ ವೇದಿಕೆಗಳು ಒದಗಿಸುವ ಔಷಧಗಳಿಗೆ ಭಾರಿ ರಿಯಾಯಿತಿ ನೀಡಲಾಗುತ್ತಿದ್ದು, ಇದಕ್ಕೆ ಔಷಧ ಮಳಿಗೆಗಳ ವಿರೋಧವಿದೆ. ಆದರೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮಳಿಗೆಗಳನ್ನು ಬಂದ್ ಮಾಡದೆ, ಕಪ್ಪು ಪಟ್ಟಿ ಧರಿಸಿ ಎಐಒಸಿಡಿ ಕರೆಗೆ ನೈತಿಕ ಬೆಂಬಲ ನೀಡಲಾಗುವುದು. ಹೀಗಾಗಿ ಶೇ. 80ಕ್ಕೂ ಅಧಿಕ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಉಳಿದಂತೆ ಶೇ. 15-20 ಮಳಿಗೆಗಳು ಮಾತ್ರ ಬಂದ್ ಮಾಡುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ತಿಳಿಸಿದೆ.
"

ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಬಂದ್‌ಗೆ ನೈತಿಕ ಬೆಂಬಲ ನೀಡಲಿದ್ದು, ರೋಗಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ಔಷಧಗಳ ಖರೀದಿಗೆ ಯಾವುದೇ ತೊಂದರೆ ಆಗದಂತೆ ಸೇವೆ ಒದಗಿಸಲು ಔಷಧ ಮಳಿಗೆಗಳಿಗೆ ಸೂಚಿಸಲಾಗಿದೆ.

— - ಸಿ. ಜಯರಾಮ್, ಅಧ್ಯಕ್ಷ, ಕರ್ನಾಟಕ ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್

ಇ-ಫಾರ್ಮಸಿಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೇ ನಕಲಿ ವೈದ್ಯರ ಚೀಟಿಗಳನ್ನು ಬಳಸಿ ಔಷಧ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಸೂಕ್ತ ಸ್ಪಂದನೆ ದೊರೆಯಲಿಲ್ಲ. ಇದು ಸಾರ್ವಜನಿಕರ ಆರೋಗ್ಯದ ಪ್ರಶ್ನೆಯಾಗಿದ್ದು, ಬಂದ್ ಮಾಡುವುದು ಅನಿವಾರ್ಯವಾಗಿದೆ.

— ರಘುನಾಥ ರೆಡ್ಡಿ, ಅಧ್ಯಕ್ಷ, ಬೆಂಗಳೂರು ಫಾರ್ಮಾ ರಿಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net