ಪ್ರತೀಕಾರಕ್ಕಾಗಿ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ

ಹೈಕೋರ್ಟ್​
ಹೈಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ಜಾತಿ ನಿಂದನೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್​
  • ಶಿಸ್ತು ಕ್ರಮಕ್ಕೆ ಪ್ರತೀಕಾರ ಎಂದು ಅವಲೋಕನ
ಶ್ರವಣ್​ ನೀರಬಿದಿರೆ ಬೆಂಗಳೂರು
ಪುರಸಭೆ ಮುಖ್ಯಾಧಿಕಾರಿಯೊಬ್ಬರ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿರುವ ಹೈಕೋರ್ಟ್​, ತಮ್ಮ ಕೆಳಹಂತದ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದಕ್ಕೆ ಪ್ರತೀಕಾರವಾಗಿ ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಶಿಸ್ತುಕ್ರಮ ಜರುಗಿಸಿದ ಅಧಿಕಾರಿಗೆ ಕಿರುಕುಳ ನೀಡುವ ಉದ್ದೇಶದಿಂದ ಮಾತ್ರ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ದೂರುದಾರನ ಪುತ್ರ ಆರೋಗ್ಯ ನಿರೀಕ್ಷಕರಾಗಿದ್ದು, ಅವರ ವಿರುದ್ಧ ಕರ್ತವ್ಯಲೋಪದ ಆರೋಪ ಹೊರಿಸಿ ಅರ್ಜಿದಾರ ಅಧಿಕಾರಿ ನೋಟಿಸ್​ ನೀಡಿದ್ದರು. ಅಲ್ಲದೆ, ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೂ ವರದಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಪ್ರಕರಣ ದಾಖಲಿಸಿ ಅರ್ಜಿದಾರರಿಗೆ ಕಿರುಕುಳ ನೀಡಲಾಗಿದೆ. ಆದ್ದರಿಂದ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿರುವ ವೈ.ಎನ್​. ಸತ್ಯನಾರಾಯಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:

ಕೋಲಾರದ ಶ್ರೀನಿವಾಸಪುರ ತಾಲೂಕಿನ ಸುಗಟೂರಿನ ಆರ್​. ಮುನಿನಾರಾಯಣ ಎಂಬವರು 2022ರ ಏ.12ರಂದು ಅಂದಿನ ಶ್ರೀನಿವಾಸಪುರ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ವೈ.ಎನ್​. ಸತ್ಯನಾರಾಯಣ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ತಮ್ಮ ಪುತ್ರ ಪೃಥ್ವಿರಾಜ್​ ಶ್ರೀನಿವಾಸಪುರ ಪುರಸಭೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, 3 ತಿಂಗಳುಗಳಿಂದ ಮುಖ್ಯಾಧಿಕಾರಿ ಸತ್ಯನಾರಾಯಣ ಅವರಿಂದ ಕಿರುಕುಳ ಅನುಭವಿಸುತ್ತಿದ್ದಾನೆ ಎಂದು ಆರೋಪಿಸಿದ್ದರು.
ತನ್ನ ಪುತ್ರನಿಗೆ ವಹಿಸಿದ್ದ ಜವಾಬ್ದಾರಿಗಳನ್ನು ಇನ್ನೊಬ್ಬ ಅಧಿಕಾರಿಗೆ ವಹಿಸಿ ಅವಮಾನ ಮಾಡಿದ್ದಾರೆ. ರಜೆ ಕೇಳಿದಾಗ ನೀನೊಬ್ಬ ಪರಿಶಿಷ್ಟ ಜನಾಂಗದವನು, ನಿನಗೆ ಮೀಸಲಾತಿಯಿಂದ ಕೆಲಸ ಸಿಕ್ಕಿದೆ. ಜವಾಬ್ದಾರಿ ವಹಿಸಲು ನೀನು ಮತ್ತು ನಿನ್ನ ಜಾತಿಯವರು ಯೋಗ್ಯರಲ್ಲ. ಅಲ್ಲದೆ, ಕಸದ ಸೈಟ್​ನಲ್ಲಿ ಕೆಲಸ ಮಾಡಿಕೊಂಡು ಸಾಯುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಶ್ರೀನಿವಾಸಪುರ ಪೊಲೀಸರಿಗೆ ದೂರು ನೀಡಿದ್ದರು. ಉದ್ದೇಶಪೂರ್ವಕ ಅವಮಾನ, ಅಪರಾಧ ಬೆದರಿಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ದಾಖಲೆ ಪರಿಶೀಲನೆ:

ತಮ್ಮ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣ ಮತ್ತು ಎಫ್​ಐಆರ್​​ ಆಧರಿಸಿದ ತನಿಖೆ ರದ್ದುಪಡಿಸುವಂತೆ ಕೋರಿ ವೈ.ಎನ್​. ಸತ್ಯನಾರಾಯಣ ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು ಶ್ರೀನಿವಾಸಪುರ ಪುರಸಭೆ ಮುಖ್ಯಾಧಿಕಾರಿಯಾಗಿದ್ದಾಗ ದೂರುದಾರ ನೀಡಿದ ಶಿಸ್ತುಕ್ರಮದ ವರದಿಯ ದಾಖಲೆಗಳನ್ನು ಪರಿಶೀಲಿಸಿ, ಪ್ರಕರಣದಿಂದ ಅರ್ಜಿದಾರರನ್ನು ಖುಲಾಸೆಗೊಳಿಸಿ ತೀರ್ಪು ನೀಡಿತು.

ಶಿಸ್ತು ಕ್ರಮಕ್ಕೆ ಪ್ರತೀಕಾರ

ಪ್ರಸ್ತುತ ಪ್ರಕರಣದಲ್ಲಿ ದೂರುದಾರನ ಪುತ್ರನ ವಿರುದ್ಧ ಸತ್ಯನಾರಾಯಣ ಶಿಸ್ತು ಕ್ರಮ ಪ್ರಾರಂಭಿಸಿದರು ಎಂದು ಕಂಡುಬರುತ್ತದೆ. ಇದಾದ ನಂತರ ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ನು ಬಳಸಿಕೊಂಡು ಕೆಳಹಂತದ ಅಧಿಕಾರಿಯ ತಂದೆ ಪ್ರಕರಣ ದಾಖಲಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಸನ್ನಿವೇಶವನ್ನು ಅರ್ಜಿದಾರರ ವಿರುದ್ಧ ಪ್ರತಿಕಾರವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net