ಇಡಿ ಬಿಡುಗಡೆ ಮಾಡಿದ್ದು ಬರೀ ಸಂಶಯಾಸ್ಪದ ನೋಟ್!...ದೂರು ನೀಡಿದವರ ಸಂಬಂಧ ಕಾಂಗ್ರೆಸ್‌ನಲ್ಲಿದೆ ಎಂದ ಸಚಿವ ಜಾರಕಿಹೊಳಿ | Satish Jarkiholi

Satish Jarkiholi | ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
Satish Jarkiholi | ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
Published on
ಬೆಂಗಳೂರು: ತಮ್ಮ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ ದಾಳಿಯ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ಇಡಿ) ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಗೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಪ್ರತಿಕ್ರಿಯಿಸಿದ್ದು, ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿರುವ ವಿದೇಶಿ ಹೂಡಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ವಿಚಾರಗಳು ಕೇವಲ ಸಂಶಯಾಸ್ಪದ ಅಂಶಗಳಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಜಾರಕಿಹೊಳಿ, ಇಡಿ ಅಧಿಕಾರಿಗಳು ನಮಗೆ ನೋಟೀಸ್ ನೀಡುತ್ತಾರೆ. ಅವರ ಬಳಿ ಇರುವ ದಾಖಲೆಗಳನ್ನು ಅವರು ನೀಡಲಿ, ನಮ್ಮಲ್ಲಿರುವ ದಾಖಲೆಗಳನ್ನು ನಾವು ಸಲ್ಲಿಕೆ ಮಾಡುತ್ತೇವೆ. ಈ ಪ್ರಕ್ರಿಯೆ ಮುಗಿಯಲು ಇನ್ನು ಸಮಯ ಹಿಡಿಯುತ್ತದೆ. ಇಡಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲೇ ಸಂಶಯಾಸ್ಪದ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಂದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ, ಅವರ ಪ್ರಶ್ನೆಗೆ ಅಲ್ಲೇ ಉತ್ತರವಿದೆ. ಅವರು ನೋಟೀಸ್ ನೀಡಿ ಕರೆದಾಗ ನಾವು ಹೋಗಿ ಎಲ್ಲದಕ್ಕೂ ಸೂಕ್ತ ಸ್ಪಷ್ಟೀಕರಣ ನೀಡುತ್ತೇವೆ ಎಂದರು.
ಲೋಕೋಪಯೋಗಿ ಇಲಾಖೆಯಲ್ಲಿ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಇಡಿ ಪ್ರಕಟಣೆಯಲ್ಲಿ ಅದನ್ನೂ ಸಹ ಸಂಶಯಾಸ್ಪದ ಎಂದಷ್ಟೇ ಹೇಳಲಾಗಿದೆ. ಮೊದಲು ಅವರು ವಿಚಾರಣೆ ನಡೆಸಲಿ, ಆಮೇಲೆ ನೋಡೋಣ. ನಾವು ವಿಚಾರಣೆಗೆ ಹಾಜರಾಗಿ ಸೂಕ್ತ ಸ್ಪಷ್ಟೀಕರಣ ನೀಡುತ್ತೇವೆ, ಎಂದರು. ಇನ್ನು ಆಫ್ರಿಕಾದ ಗಣಿಗಳಲ್ಲಿ ಪಾಲು ಹೊಂದಿದ್ದಾರೆ ಎಂಬ ವಿಚಾರಕ್ಕೆ, ಅವರು ಆರೋಪ ಮಾಡಿದ್ದಾರಷ್ಟೇ. ಅವರ ಬಳಿ ಸೂಕ್ತ ದಾಖಲೆಗಳಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸಚಿವರು ಸವಾಲು ಹಾಕಿದರು.
ಈ ಪತ್ರಿಕಾ ಪ್ರಕಟಣೆಯಿಂದ ರಾಜಕೀಯವಾಗಿ ಹಾನಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಪ್ರಕಟಣೆಯಲ್ಲಿ ಸಂಶಯಾಸ್ಪದ ಎಂದಷ್ಟೇ ಇರುವುದರಿಂದ ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ. ನಮಗೆ ಇಡಿ ಸಂಸ್ಥೆಗಿಂತಲೂ ಜನತಾ ನ್ಯಾಯಾಲಯವೇ ಮುಖ್ಯ. ಅವರು ಅವರ ಕೆಲಸವನ್ನು ಮಾಡಲಿ ಎಂದು ಹೇಳಿದರು.

ದೂರು ನೀಡಿದವರ ಬಗ್ಗೆ ಗೊತ್ತಿದೆ!

ದೂರು ನೀಡಿದವರ ಬಗ್ಗೆ ಸ್ಪಷ್ಟತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ದೂರು ಕೊಟ್ಟಿದ್ದಾರೆ ಎಂಬುದು ನಮಗೆ ಗೊತ್ತಿದೆ. ಈ ಕುರಿತು ನಾನು ಈಗಾಗಲೇ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದೇನೆ ಎಂದರು. ನಿಮ್ಮದೇ ಪಕ್ಷದವರು ದೂರು ನೀಡಿದ್ದಾರೆಯೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ವಿಷಯವನ್ನು ಮುಖ್ಯಮಂತ್ರಿಗಳೇ ನೋಡಿಕೊಳ್ಳುತ್ತಾರೆ. ದೂರು ನೀಡಿದವರ ಸಂಬಂಧ ಕಾಂಗ್ರೆಸ್‌ನಲ್ಲಿದೆಯೇ ಹೊರತು, ಅವರ ವೋಟುಗಳೆಲ್ಲವೂ ಬಿಜೆಪಿಯಲ್ಲೇ ಇವೆ ಎಂದು ಜಾರಕಿಹೊಳಿ ಮಾರ್ಮಿಕವಾಗಿ ಉತ್ತರಿಸಿದರು.
ಸಿದ್ದರಾಮಯ್ಯನವರನ್ನು ಚುನಾವಣೆಗೆ ಮತ್ತೆ ನಿಲ್ಲಿ ಎಂದು ರಾಹುಲ್ ಗಾಂಧಿ ಹೇಳಿರುವ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯನವರ ಬೆಂಬಲ ನಮಗೆ ಮುಂದಿನ ಚುನಾವಣೆಯಲ್ಲಿ ಬೇಕು. ಇದರ ಬಗ್ಗೆ ನಾನು ಮೊದಲೇ ಹೇಳಿದ್ದೇನೆ. ಆದರೆ ಸ್ಪರ್ಧೆ ಮಾಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು. ಜಾತಿ ಗಣತಿ ವರದಿ ಕ್ಯಾಬಿನೆಟ್‌ನಲ್ಲಿ ಬಿಡುಗಡೆ ಮಾಡುವುದು ಮುಖ್ಯಮಂತ್ರಿಗಳಿಗೆ ವಿವೇಚನೆಗೆ ಬಿಟ್ಟಿದ್ದು. ಸಾಧಕ ಬಾಧಕಗಳನ್ನು ನೋಡಿ ನಿರ್ಧಾರ ಮಾಡಬೇಕು. ನಾವು ಸಿಎಂ ಅವರಿಗೆ ಮನವಿ ಮಾಡುತ್ತೇವೆ, ಅದರ ಅವಶ್ಯಕತೆ ಇದೆ. ಅದನ್ನು ಜಾರಿ ಮಾಡುವುದಕ್ಕೆ ಯಾರ ವಿರೋಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇಡಿ ದಾಳಿ ರಾಜಕೀಯ ಪ್ರೇರಿತ: ಸಚಿವ ಪ್ರಿಯಾಂಕ್ ಖರ್ಗೆ

ಸಚಿವ ಸತೀಶ್ ಜಾರಕಿಹೊಳಿ ಅಕ್ರಮ ಹೂಡಿಕೆ ಮಾಡಿದ್ದಾರೆ ಎಂಬ ಇಡಿ ಪತ್ರಿಕಾ ಪ್ರಕಟಣೆ ವಿಚಾರವಾಗಿ ಬೆಂಗಳೂರಿನಲ್ಲಿ ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಡಿ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರೆಸ್ ನೋಟ್‌ನಲ್ಲಿ ಏನಿದೆ..? ಇನ್ನು ಮುಂದಿನ ತನಿಖೆ ನಡೆಯಬೇಕು ಅಂತ ಹೇಳಿದ್ದಾರೆ. ಇದು ಆರೋಪ, ಇದು ಆರೋಪ ಎಂದಷ್ಟೇ ಇದೆ. ಅಲ್ಲಿ ಸಾಕ್ಷಿ ಸಿಕ್ಕಿದೆ ಎಂದು ಹೇಳುತ್ತಾರೆ, ಆದರೆ ಏನು ಸಾಕ್ಷಿ ಸಿಕ್ಕಿದೆ ಎಂದು ಎಲ್ಲೂ ಹೇಳಿಲ್ಲ. ನಾವು ಇಂತಹ ನೂರು ಪ್ರೆಸ್ ನೋಟ್‌ಗಳನ್ನು ನೋಡಿದ್ದೇವೆ, ಇದೇನು ಹೊಸದೇ ಎಂದು ಸಚಿವ ಖರ್ಗೆ ಪ್ರಶ್ನಿಸಿದರು. ಮೊನ್ನೆ ತಾನೇ ನಾನು ಅಂಕಿ-ಅಂಶ ಕೊಟ್ಟಿದ್ದೆ. 196 ದಾಳಿಗಳ ಪೈಕಿ ಕೇವಲ ಎರಡು ಕೇಸ್‌ಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಎಲ್ಲಾ 196 ದಾಳಿಗಳಿಗೂ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ ಅಲ್ವೇ..? ಹಾಗಾದರೆ ಶಿಕ್ಷೆಯ ಪ್ರಮಾಣ ಯಾಕೆ ಇಷ್ಟು ಕಮ್ಮಿ ಇದೆ ಎಂದು ಖರ್ಗೆ ಪ್ರಶ್ನಿಸಿದರು.

ಪ್ರಧಾನಿ ಮೋದಿ ಹೇಳಿಲ್ವಾ..?

ನಿನ್ನೆ ಸತೀಶ್ ಜಾರಕಿಹೊಳಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ, ನಾವು ಎಲ್ಲವನ್ನೂ ಸಾಬೀತು ಮಾಡಬಹುದು. ನಾವು ಎಲ್ಲೂ ಹೂಡಿಕೆ ಮಾಡಿಲ್ಲ, ಹೂಡಿಕೆ ಮಾಡಬೇಕು ಅಂತ ಇದ್ದೀವಿ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ..? ಭಾರತೀಯರು ಹೊರಗಡೆ ಹೋಗಿ ಬಂಡವಾಳ ಹೂಡಿಕೆ ಮಾಡಬೇಕು ಎಂದು ಪ್ರಧಾನಿ ಮೋದಿಯವರೇ ಹೇಳುತ್ತಾರೆ. ಇವರು ಅದನ್ನೇ ಮಾಡುತ್ತಿದ್ದಾರೆ ಅಲ್ವೇ? ಕಾನೂನುಬಾಹಿರವಾಗಿ ಹೂಡಿಕೆ ಮಾಡಿದ್ದರೆ ಏನೇ ಇರಲಿ, ಅದಕ್ಕೆ ಸಚಿವರು ಕ್ಲಿಯರ್ ಆಗಿ ಹೇಳಿಕೆ ನೀಡಿದ್ದಾರೆ. ಕಾಂಗೋದಲ್ಲಾದರೂ ಇರಲಿ, ಕೆನಡಾದಲ್ಲಾದರೂ ಇರಲಿ ಹೂಡಿಕೆ ಮಾಡುವುದು ತಪ್ಪಾ? ಎಂದು ಖರ್ಗೆ ಪ್ರಶ್ನಿಸಿದರು.
ವಿದೇಶದಲ್ಲಿ ಹೂಡಿಕೆ ಮಾಡುವುದು ತಪ್ಪು ಎಂದು ಎಲ್ಲೂ ಹೇಳಿಲ್ಲ, ಪ್ರಧಾನಿಯವರೇ ಮಾಡಬೇಕು ಎಂದು ಹೇಳಿದ್ದಾರೆ, ಅವರು ಹೂಡಿಕೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇಡಿಯವರು ಇಲ್ಲಿ ಲಂಚ ತೆಗೆದುಕೊಂಡು ಹೂಡಿಕೆ ಮಾಡಿದ್ದಾರೆ ಎಂದು ಕಥೆ ಕಟ್ಟುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಅವರು ದಾಖಲೆ ಸಮೇತ ಕೊಡ್ತೀನಿ, ಹೂಡಿಕೆ ಮಾಡೋಕೆ ರೆಡಿಯಾಗ್ತಾ ಇದ್ದೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆ ನೀಡಲು ಲಂಚ ಪಡೆದ ಆರೋಪದ ಕುರಿತು ಪ್ರತಿಕ್ರಿಯಿಸಿ ಖರ್ಗೆ, ಗಾಳಿ ಸುದ್ದಿಗೆ ನಾನು ಉತ್ತರ ಕೊಡೋಕೆ ಆಗಲ್ಲ. ಇಡಿಯವರು ಹೇಳಲಿ, ದಾಖಲೆ ಕೊಡಲಿ. ಇಂತಹ ಗುತ್ತಿಗೆಯಲ್ಲಿ ಲಂಚ ಪಡೆದಿದ್ದಾರೆ, ಆ ಹಣವನ್ನು ಇಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ದಾಖಲೆ ಕೊಡಲಿ. ಹಿಂದೆ ಇಂತಹ ನೂರು ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ ಅಲ್ವಾ..? ನಾನು ಶಿಕ್ಷೆಯ ಪ್ರಮಾಣ ಯಾಕೆ ಇಷ್ಟು ಕಮ್ಮಿ ಇದೆ ಎಂದು ಕೇಳುತ್ತಿದ್ದೇನೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ದಾಳಿ ಎಂದರು.

ವಿಜಯೇಂದ್ರ ವಿರುದ್ಧ ಆರೋಪ ಮಾಡಿಲ್ಲವೇ...?

ಇದೇ ಯತ್ನಾಳ್ ಅವರು ವಿಜಯೇಂದ್ರ ಅವರ ಬಗ್ಗೆ ಆರೋಪ ಮಾಡಲಿಲ್ಲವೇ..? ಅವರ ಮೇಲೆ ಇಡಿ, ಐಟಿ ದಾಳಿ ಆಗಿದೆಯಾ? ಪಾಸ್‌ಪೋರ್ಟ್ ತೆಗೆದು ನೋಡಿ, ಯಾರ್ ಯಾರು ಎಲ್ಲೆಲ್ಲಿಗೆ ಹೋಗಿದ್ದಾರೆ ಎಂದು ನಾನು ಹೇಳಿದ್ದೇನಾ..? ನಮ್ಮ ಪಾಸ್‌ಪೋರ್ಟ್ ನಾವು ನೀಡುತ್ತೇವೆ, ಬಿಜೆಪಿಯವರು ನೀಡುತ್ತಾರಾ? ದುಬೈ, ಮಾರಿಷಸ್‌ಗೆ ಎಷ್ಟು ಸಲ ಹೋಗಿ ಬಂದಿದ್ದಾರೆ ಎಂದು ಬಿಜೆಪಿ ಶಾಸಕರುಗಳು, ಮಾಜಿ ಸಚಿವರು ಎಲ್ಲಾ ಪಾಸ್‌ಪೋರ್ಟ್ ಕೊಡಲಿ. ಎಲ್ಲಾ ತನಿಖೆಯಾಗಲಿ, ನಾವು ಕೊಡುತ್ತೇವೆ. ಕಾನೂನು ರೀತಿ ಹೂಡಿಕೆ ಮಾಡಿದರೆ ಅಕ್ರಮವಲ್ಲ. ಯಾವ ಗುತ್ತಿಗೆಯಲ್ಲಿ ಎಷ್ಟು ಲಂಚ ತೆಗೆದುಕೊಂಡಿದ್ದಾರೆ ಎಂಬುದನ್ನು ತೋರಿಸಲಿ ಖರ್ಗೆ ಸವಾಲು ಹಾಕಿದರು.

ಸಿಎಂ ಡಿಕೆಶಿಗೆ ಮಾನಸಿಕ ಹಿಂಸೆ!

ಇಡಿಯ ಈ ವರ್ತನೆಗೆ ದೊಡ್ಡ ಉದಾಹರಣೆ ಅಂದ್ರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು. ಏನೇನು ಆಪಾದನೆ ಮಾಡಿದರು, ಕೊನೆಗೆ ನ್ಯಾಯಾಲಯದಲ್ಲಿ ಏನಾಯಿತು..? ಅದಕ್ಕೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದವರು ಕ್ಷಮೆ ಕೇಳಿದರಾ.? ಸಿಎಂ ಮತ್ತು ಅವರ ಕುಟುಂಬದವರಿಗೆ ಮಾನಸಿಕವಾಗಿ ಹಿಂಸೆ ಕೊಟ್ಟರು, ಇಷ್ಟು ಚಾರಿತ್ರ್ಯವಧೆ ಮಾಡಿದರು, ಅದಕ್ಕೆ ಕ್ಷಮೆ ಕೇಳಿದರಾ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಹೋದ ತಕ್ಷಣವೇ ಎಲ್ಲವೂ ಶುದ್ಧವಾಗುತ್ತದೆ. ಯಾರು ಯಾರು ಅತೀ ಭ್ರಷ್ಟ ರಾಜಕಾರಣಿಗಳು ಇದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದರೋ, ಅವರು ಬಿಜೆಪಿಗೆ ಹೋದ ತಕ್ಷಣವೇ ಗಂಗಾ ಜಲದಿಂದ ಪವಿತ್ರವಾಗಿ ಬಿಡುತ್ತಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ. ನನ್ನ ಮೇಲೆಯೂ ದಾಳಿ ಮಾಡುತ್ತಾರೆ ಎಂದು ನಾನು ಹೇಳಿದ್ದೇನೆ. ಇದೆಲ್ಲವೂ ಟಾರ್ಗೆಟ್. ನಾನು ಕೆಪಿಎಸ್‌ಸಿಯಲ್ಲಿ ಹಣ ನುಂಗಿದ್ದೇನೆ ಎಂದು ಆರೋಪ ಮಾಡಿದ್ದರು, ಅದಕ್ಕೆ ಒಂದು ದಾಖಲೆ ಕೊಟ್ಟಿದ್ದಾರಾ..? ಸುಮ್ಮನೆ ಹಿಟ್ ಅಂಡ್ ರನ್ ಮಾಡಿದ್ದಾರೆ ಎಂದು ಪ್ರಿಯಾಂಕಾ ಖರ್ಗೆ ವಾಗ್ದಾಳಿ ನಡೆಸಿದರು.
ನಮ್ಮ ಮೇಲೆ ಯಾಕೆ ಕಣ್ಣಿಟ್ಟಿದ್ದಾರೆ, ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರೆ, ನಾವು ಅವರ ಹಗರಣಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅವರ ಲೋಪಗಳನ್ನು ಎತ್ತಿಹಿಡಿಯುತ್ತಿದ್ದೇವೆ. ದೇಶದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗದ ಬಗ್ಗೆ ನಾವು ಬಹಿರಂಗವಾಗಿ ಮಾತನಾಡುತ್ತಿದ್ದೇವೆ. ನಾವು ಆರ್‌ಎಸ್‌ಎಸ್ ಬಗ್ಗೆ ಪ್ರಶ್ನೆ ಮಾಡಿದ್ದೇವೆ, ಅವರ ಅಸ್ತಿತ್ವದ ಬಗ್ಗೆ, ನೋಂದಣಿ ಬಗ್ಗೆ ಕೇಳಿದ್ದೇವೆ, ಅದಕ್ಕೆ ಅವರಿಗೆ ಉತ್ತರ ಕೊಡೋಕೆ ಆಗ್ತಾ ಇಲ್ಲ. ಅದಕ್ಕೆ ಯಾರು ಪ್ರಶ್ನೆ ಮಾಡುತ್ತಾರೋ ಅವರ ಮೇಲೆ ದಾಳಿ ಮಾಡಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net