ಸಾಧನೆಗೆ ಮನಸ್ಸು ಮುಖ್ಯ

ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿಯನ್ನು ಸನ್ಮಾನಿಸಲಾಯಿತು.ಮಂಜುನಾಥ ಜುನಗೊಂಡ, ಮಂಜುನಾಥ ತುಮ್ಮರಮಟ್ಟಿ ಮತ್ತಿತರರಿದ್ದಾರೆ.
ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿಯನ್ನು ಸನ್ಮಾನಿಸಲಾಯಿತು.ಮಂಜುನಾಥ ಜುನಗೊಂಡ, ಮಂಜುನಾಥ ತುಮ್ಮರಮಟ್ಟಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಅಭಿಮತ
  • ವಿಶೇಷ ಉಪನ್ಯಾಸ ಕಾರ್ಯಕ್ರಮ
ವಿಜಯಪುರ : ನಮ್ಮಲ್ಲಿರುವ ಸಮಸ್ಯೆಗಳು ನಮ್ಮ ಸಾಧನೆಗೆ ಪೂರಕವಾಗಬೇಕೆ ಹೊರತು ಮಾರಕವಾಗಬಾರದು. ಸಾಧನೆ ಮಾಡುವ ಮನಸ್ಸಿದ್ದರೆ ಸರ್ವ ಸಿದ್ಧಿಯಾಗುತ್ತದೆ ಎಂದು ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಹೇಳಿದರು.

ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಣಿತ ಎನ್ನುವುದು ಹಲವರಿಗೆ ಕಬ್ಬಿಣದ ಕಡಲೆಯಾದರೆ ಕೆಲವರಿಗೆ ಅದು ಎಲ್ಲದಕ್ಕಿಂತಲೂ ಸಾಮಾನ್ಯವಾದ ವಿಷಯವಾಗಿ ಕಾಣುತ್ತದೆ. ಅದಕ್ಕೆ ಕಾರಣ ಆ ವಿಷಯದ ಮೇಲಿರುವ ಅಕ್ಕರೆ. ಯಾವುದನ್ನು ನಾವು ಇಷ್ಟಪಟ್ಟು ಮಾಡುತ್ತೇವೆಯೋ ಅದು ಎಂದಿಗೂ ನಮಗೆ ಬೇಸರ ಮೂಡಿಸಲ್ಲ, ಇಷ್ಟಪಡದೇ ಮಾಡಿದಲ್ಲಿ ಯಾವುದು ನಮಗೆ ಸಿದ್ಧಿಸುವುದಿಲ್ಲ. ಶಕುಂತಲಾ ದೇವಿ ಮಾನವ ಕಂಪ್ಯೂಟರ್ ಎಂದು ಕರೆಸಿಕೊಳ್ಳುತ್ತಾರೆ ಎಂದರೆ ನಾನೇಕೆ ಕರೆಸಿಕೊಳ್ಳಬಾರದು ಎಂದು ನಿರ್ಧಾರ ಮಾಡಿದ್ದಕ್ಕಾಗಿ ಇಂದು ನಿಮ್ಮೆದುರಿಗೆ ನಿಂತು ಮಾತಾಡುತ್ತಿದ್ದೇನೆ. ಅದಕ್ಕೆ ಹೇಳುತ್ತೇನೆ ಬದುಕಿನಲ್ಲಿ ಯಾವುದನ್ನು ಕೊರತೆ ಎಂದು ತಿಳಿದುಕೊಳ್ಳುತ್ತೇವೆಯೋ ಅದು ಎಂದಿಗೂ ನಮಗೆ ನೆಮ್ಮದಿ ನೀಡುವುದಿಲ್ಲ. ದೇವರು ನನಗೆ ದೃಷ್ಟಿ ಕೊಟ್ಟಿದ್ದರೆ ಬಹುಶಃ ಇಂತಹ ಸಾಧನೆ ಮಾಡುವ ಧೈರ್ಯ ಮಾಡುತ್ತಿರಲಿಲ್ಲ ಎಂದರು.

ನಮಗಿರುವ ಕೊರತೆಯನ್ನೇ ಬದುಕಿನ ಒರತೆಯನ್ನಾಗಿ ಮಾಡಿಕೊಂಡು ಹೆಜ್ಜೆ ಹಾಕಿದ್ದೇ ಆದಲ್ಲಿ ಬಾಳು ಹಸಿರಾಗುತ್ತದೆ. ನಾವಿಲ್ಲಿ ಬಂದಿದ್ದು ಸಾಧನೆ ಮಾಡುವುದಕ್ಕಾಗಿಯೇ ಹೊರತು ಸಂಕಟ ಪಟ್ಟುಕೊಳ್ಳುವುದಕ್ಕಲ್ಲ. ಸವಾಲು ಹಾಕುವ ಜನಗಳ ಎದುರಿಗೆ ಜವಾಬು ನೀಡುತ್ತಲೇ ಬದುಕುವುದನ್ನು ಕಲಿತಾಗ ಮಾತ್ರ ಬದುಕಿನಲ್ಲಿ ಏನಾದರು ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಪ್ರಾಚಾರ್ಯ ಮಂಜುನಾಥ ಜುನಗೊಂಡ ಮಾತನಾಡಿ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಎಂದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದ ಮಾತು ಅಕ್ಷರಶಃ ಸತ್ಯ ಯುವಜನತೆ ಎದೆಯಲ್ಲಿ ಅಚ್ಚು ಹಾಕಿಸಿಕೊಳ್ಳಬೇಕು. ಕಣ್ಣಿಲ್ಲದ ವ್ಯಕ್ತಿ ಇಷ್ಟೆಲ್ಲ ಮಾಡುವಾಗ ದೇವರು ನಮಗೆ ಎಲ್ಲವನ್ನು ಸರಿಯಾಗಿ ಇಟ್ಟಿದ್ದಾನೆ. ಹೊಸ ಶತಮಾನಕ್ಕೆ ಮುನ್ನುಡಿ ಬರೆಯುವ ಅವಕಾಶ ಕೊಟ್ಟಿದ್ದಾನೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಮತ್ತಿತರರಿದ್ದರು. ಮುಸ್ತಾಕ ಮಲಘಾಣ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net