ಬದುಕಿಗೆ ಬೆಳಕಾಗುವ ಸಂದೇಶಗಳು; ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಉಪದೇಶ-ಉಪಕಥೆ

ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ
ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ
Published on

ಡಾ. ಶ್ರದ್ಧಾನಂದ ಸ್ವಾಮೀಜಿ, ಶಿವಾನಂದ ಮಠ, ಸದಲಗಾ

ವಿಜಯಪುರ: ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ತಮ್ಮ ಪ್ರವಚನಗಳ ಮೂಲಕ ಅಸಂಖ್ಯ ಜನರ ಬದುಕನ್ನು ಬದಲಿಸಿದರು. ಪ್ರವಚನದಲ್ಲಿ ಅವರು ಬಳಸುತ್ತಿದ್ದ ಕಥೆ, ಪ್ರೇರಣಾ ಸಂದೇಶಗಳು ಎಂದೆಂದಿಗೂ ಸ್ಪೂರ್ತಿದಾಯಕ. ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರು ಪ್ರವಚನಗಳಲ್ಲಿ ಹೇಳಿದ ಕಥೆಗಳು ಮತ್ತು ಅವರು ಸಾರಿದ ಸಂದೇಶಗಳ ಅವಲೋಕನ ಇಲ್ಲಿದೆ.

ಹಳ್ಳಿಯ ಮನುಷ್ಯ ಸಂಜೆಯ ಸಮಯ ನಾಟಕ ನೋಡಲು ಹೋಗಿದ್ದ. ಸ್ವಲ್ಪ ಸಮಯದ ಹಿಂದೆ ಸಂತೆಯಲ್ಲಿ ತನ್ನ ಕಾಳು ಕಡಿ ಮಾರಿ ಬಂದಿದ್ದ. ಹೊತ್ತು ಮುಳುಗುವ ಸಮಯಕ್ಕೆ ನಾಟಕ ಪ್ರಾರಂಭವಾಯಿತು. ಅದು ಸುಂದರ ಸಾಮಾಜಿಕ ನಾಟಕ. ಅದರಲ್ಲಿ ಹಾಡು, ಕುಣಿತ, ಹಾಸ್ಯ ಎಲ್ಲವೂ ಆಕರ್ಷಕವಾಗಿತ್ತು. ನಾಟಕ ನೋಡುತ್ತ ಆ ಮನುಷ್ಯ ಅದೆಷ್ಟು ಮಗ್ನನಾಗಿದ್ದನೆಂದರೆ ಅವನಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. 

ಮಧ್ಯರಾತ್ರಿ ಹನ್ನೆರಡು ಗಂಟೆ ಹೊತ್ತಿಗೆ ನಾಟಕ ಮುಗಿಯಿತು. ನಂತರ ಆ ಮನುಷ್ಯ ಎದ್ದು ತನ್ನ ಕಿಸೆಯಲ್ಲಿ ಕೈ ಹಾಕಿದ. ಸಂತೆಯಲ್ಲಿ ಅವನು ಕಾಳು ಕಡಿ ಮಾರಿ ತಂದಿದ್ದ ಹಣದ ಗಂಟೇ ಮಾಯವಾಗಿತ್ತು. ಕಳವಾಗಿ ಹೋಗಿತ್ತು. ಇದೆಂಥ ಮಗ್ನತೆ? ಇದೇ ಮಗ್ನತೆ ಅಧ್ಯಯನ, ಆರಾಧನೆ, ಅನುಭಾವ, ಅನುಷ್ಠಾನದಲ್ಲಿ ಬಂದರೆ ಅವನೇ ಯೋಗಿ, ತ್ಯಾಗಿ, ಸಂತ ಮಹಂತ!

ಓರ್ವ ಭಿಕ್ಷುಕ ಎಪ್ಪತ್ತು, ಎಂಭತ್ತು ವರುಷಗಳವರೆಗೆ ಭಿಕ್ಷೆ ಬೇಡಿ ಬದುಕಿದ್ದ. ಕೊನೆಗೆ ಯಾವುದೋ ಕಾಯಿಲೆಯಿಂದ ಪ್ರಾಣಬಿಟ್ಟ. ಅವನು ಊರ ಹೊರಗೆ ಗುಡಿಸಲಿನಲ್ಲಿ ವಾಸವಾಗಿದ್ದ. ಊರವರೆಲ್ಲ ಸೇರಿ ಅವನಿಗೆ ಅಗ್ನಿಸಂಸ್ಕಾರ ಮಾಡಲು ಮುಂದಾದರು. ಅವನು ಭಿಕ್ಷೆ ಬೇಡಲು ಬಳಸುತ್ತಿದ್ದ ಭಿಕ್ಷಾಪಾತ್ರೆ ಎಣ್ಣೆ, ಮಣ್ಣು ತಿಂದು ತುಂಬ ಕೊಳೆಯಾಗಿತ್ತು. ದಾರಿದ್ರ್ಯದ ಸಂಕೇತವಾಗಿರುವ ಆ ಪಾತ್ರೆಯನ್ನು ಅವನ ಜೊತೆಗೆ ಇಟ್ಟು ಅಗ್ನಿಸಂಸ್ಕಾರ ಮಾಡಿದರು. ನಾಲ್ಕೈದು ತಾಸಿನ ನಂತರ ಉರಿಯೆಲ್ಲ ಆರಿದ ಮೇಲೆ ಜನರೆಲ್ಲ ಹೊರಟು ನಿಂತರು. ಅಷ್ಟರಲ್ಲಿ ಅವರಿಗೆ ಅಂತ್ಯಸಂಸ್ಕಾರದ ಬೂದಿಯಲ್ಲಿ ಏನೋ ಮಿಂಚಿದಂತೆ ಕಾಣಿಸಿತು. 

ಕುತೂಹಲದಿಂದ ಜನರು ಅದನ್ನು ಹೊರಗೆ ತೆಗೆದು ನೋಡಿದರೆ; ಅದು ಚಿನ್ನದ ಪಾತ್ರೆ, ಭಿಕ್ಷುಕನು ಬಳಸುತ್ತಿದ್ದ ಭಿಕ್ಷಾಪಾತ್ರೆ! ದೇವರು ನಮಗೆ ನೀಡಿದ ಮಾನವಜನ್ಮವೇ ಒಂದು ಚಿನ್ನದ ಪಾತ್ರೆ, ಅಕ್ಷಯಪಾತ್ರೆ, ರಕ್ಷಾಪಾತ್ರೆ! ಇದನ್ನರಿಯದೆ ಎಷ್ಟೋಜನರು ಭಿಕ್ಷುಕರಂತೆ ಬದುಕುತ್ತಿದ್ದಾರೆ. ಒಂದು ಬಾನಕ್ಕಿಯು ಆಗಸದೆತ್ತರಕ್ಕೆ ಹಾರಿ ಹೋಗಿ ಹಾಡಿನ ಮಳೆಯನ್ನು ಕರೆಯುತ್ತಿತ್ತು. ಅದನ್ನು ಕೇಳಿದ ದೇವದೂತನಿಗೆ ತುಂಬ ಸಂತೋಷವಾಯಿತು. ಹಾಡು ನಿಂತ ಮೇಲೆ ಹಕ್ಕಿಗೆ ದೇವದೂತ ಕೇಳಿದ- ‘ಬಾನಕ್ಕಿಯೇ ನಿನ್ನ ಹಾಡು ಕೇಳಿ ನನಗೆ ಅಪಾರ ಸಂತೋಷವಾಗಿದೆ. 

ನಾನು ನಿನ್ನನ್ನು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋಗಬೇಕೆಂದಿದ್ದೇನೆ, ಬರುವೆಯಾ?’ ಹಕ್ಕಿ ಕೇಳಿತು, ‘ಸ್ವರ್ಗಲೋಕದಲ್ಲಿ ನನಗೆ ಹಾಡಲು ಅವಕಾಶ ಇದೆಯಾ?’ ದೇವದೂತ ಹೇಳಿದ, ‘ಸ್ವರ್ಗದಲ್ಲಿ ನೀನು ಏನೂ ಮಾಡಬೇಕಾಗಿಲ್ಲ. ಅಲ್ಲಿ ಹಾಡುವವರು, ಕುಣಿಯುವವರು ಎಲ್ಲ ಇರುತ್ತಾರೆ. ನೀನು ಸುಮ್ಮನಿದ್ದರೆ ಸಾಕು’. ಹಕ್ಕಿ ಹೇಳಿತು- ‘ನಾನು ನಿನ್ನ ಸ್ವರ್ಗಕ್ಕೆ ಬರಲಾರೆ. ಸುಮ್ಮನಿರುವುದು ಹಕ್ಕಿಗಳ ಧರ್ಮವಲ್ಲ. ಹಾಡಿ, ಕುಣಿದು ನಮ್ಮ ಸ್ವರ್ಗ ನಾವೇ ನಿರ್ವಿುಸಿ ಕೊಳ್ಳುತ್ತೇವೆ’. ಮನುಷ್ಯರು ಹಗಲು-ರಾತ್ರಿ ದುಡಿದು ಈ ಭೂಲೋಕವನ್ನೇ ಸ್ವರ್ಗಲೋಕವನ್ನಾಗಿ ಮಾಡ ಬೇಕೆಂಬುದೇ ಆ ಬಾನಹಕ್ಕಿಯ- ಅಮರ ಸಂದೇಶ!

ಡಯೋಜಿನರು ದೊಡ್ಡ ತತ್ವಜ್ಞಾನಿಗಳು. ಮೈಮೇಲೆ ಒಂದಿಷ್ಟು ಕೌಪಿನು, ಒಂದು ಕೈಯಲ್ಲಿ ಕೋಲು. ಇನ್ನೊಂದು ಕೈಯಲ್ಲಿ ಭಿಕ್ಷಾಪಾತ್ರೆ, ಜೊತೆಗೊಂದು ನಾಯಿ. ಇದಿಷ್ಟೇ ಅವರ ಸಂಪತ್ತು. ಒಂದುದಿನ ಆ ದೇಶದ ರಾಜ ಅಲೆಗ್ಸಾಂಡರ್ ಬಂದು ಹೇಳಿದ- ‘ನಾನು ಈ ದೇಶದ ಮಹಾರಾಜ. ನೀವು ಶ್ರೇಷ್ಠಜ್ಞಾನಿಗಳು. ನಿಮಗೆ ಏನಾದರೂ ಸಹಾಯಬೇಕಾದರೆ ಹೇಳಿ, ನಾನು ಮಾಡುತ್ತೇನೆ’.

ಬಿಸಿಲು ಕಾಯಿಸುತ್ತ ಕುಳಿತಿದ್ದ ಡಯೋಜಿನ್ ಹೇಳಿದರು-‘ಬಿಸಿಲಿಗೆ ಅಡ್ಡವಾಗಿ ನಿಂತಿರುವ ನೀವು ಬಿಸಿಲು ಬಿಟ್ಟು ಸ್ವಲ್ಪ ಪಕ್ಕಕ್ಕೆ ಸರಿದರೆ ಸಾಕು, ಇದೇ ನೀವು ನನಗೆ ಮಾಡಬಹುದಾದ ದೊಡ್ಡ ಸಹಾಯ’. ನಿಸರ್ಗದ ನಿಜಸಿರಿಯ ಮಹತ್ವವನ್ನು ಅರಿತಿರುವ ಜ್ಞಾನಿಗಳು ಎಂದಾದರೂ ನಮ್ಮ ನಶ್ವರ ಸಿರಿಗೆ ಕೈ ಚಾಚುವರೇ? ಅಮೂಲ್ಯವೂ ಅದ್ಭುತವೂ ಆದ ಈ ನಿಸರ್ಗ ಸ್ವರ್ಗದ ಮಹತ್ವವನ್ನು ಅರಿತವರು ಎಂದೂ ಯಾರಿಗೂ ಕೈ ಚಾಚುವುದಿಲ್ಲ. ನೆಲ, ಜಲ, ಗಾಳಿ, ಬೆಳಕು ಬಯಲಿನಿಂದಾದ ಈ ನಿಸರ್ಗವೇ ಅಮರಸಿರಿ. ಅದನ್ನು ನಾವೆಲ್ಲ ಉಳಿಸೋಣ ಬೆಳೆಸೋಣ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net