ಶಿಕ್ಷಣ ಸಂಸ್ಥೆ ದಾನಿಗಳ ಸಂಸ್ಮರಣೆ ಅತ್ಯವಶ್ಯ

ವಿಜಯಪುರದ ಮೂಲ ನಿವಾಸಿ ಶ್ರೀನಿವಾಸ ಬಿದರಿ ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಧಾನ ಆಯುಕ್ತರಿಂದ ಮುಖ್ಯ ಪ್ರಧಾನ ಆಯುಕ್ತರೆಂದು ಬಡ್ತಿ ಪಡೆದ ಹಿನ್ನೆಲೆ ಅವರ ಸ್ನೇಹಿತರು, ಶಾಲಾ-ಕಾಲೇಜು ಸಹಪಾಠಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ರವಿಂದ್ರ ಬಿಜ್ಜರಗಿ, ಗಂಗಾಧರ ಸಂಬಣ್ಣಿ, ವಿಜಯ ಡೋಣಿ ಮತ್ತಿತರರಿದ್ದಾರೆ.
ವಿಜಯಪುರದ ಮೂಲ ನಿವಾಸಿ ಶ್ರೀನಿವಾಸ ಬಿದರಿ ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಧಾನ ಆಯುಕ್ತರಿಂದ ಮುಖ್ಯ ಪ್ರಧಾನ ಆಯುಕ್ತರೆಂದು ಬಡ್ತಿ ಪಡೆದ ಹಿನ್ನೆಲೆ ಅವರ ಸ್ನೇಹಿತರು, ಶಾಲಾ-ಕಾಲೇಜು ಸಹಪಾಠಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ರವಿಂದ್ರ ಬಿಜ್ಜರಗಿ, ಗಂಗಾಧರ ಸಂಬಣ್ಣಿ, ವಿಜಯ ಡೋಣಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಪ್ರಧಾನ ಆಯುಕ್ತ ಶ್ರೀನಿವಾಸ ಬಿದರಿ ಅಭಿಮತ
  • ಸ್ನೇಹಿತರಿಂದ ಹೃದಯಸ್ಪರ್ಶಿ ಸನ್ಮಾನ
ವಿಜಯಪುರ: ತಲೆ ತಲಾಂತರದಿಂದ ಬಂದ ಆಸ್ತಿಗಳನ್ನು ನಮ್ಮ ಹಿರಿಯರು ದಾನ ನೀಡಿದ್ದರ ಫಲವಾಗಿ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಸತ್ಪ್ರಜೆಗಳನ್ನು ರೂಪಿಸಿವೆ ಎಂದು ಪಶ್ಚಿಮ ಬಂಗಾಳ ರಾಜ್ಯದ ಆದಾಯ ತೆರಿಗೆ ಇಲಾಖೆ ಮುಖ್ಯ ಪ್ರಧಾನ ಆಯುಕ್ತರೂ ಆದ ವಿಜಯಪುರ ನಿವಾಸಿ ಶ್ರೀನಿವಾಸ ಬಿದರಿ ಹೇಳಿದರು.
ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಧಾನ ಆಯುಕ್ತರಿಂದ ಮುಖ್ಯ ಪ್ರಧಾನ ಆಯುಕ್ತರೆಂದು ಬಡ್ತಿ ಪಡೆದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸ್ನೇಹಿತರು, ಶಾಲಾ-ಕಾಲೇಜು ಸಹಪಾಠಿಗಳಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಗರದ ದರಬಾರ್, ಪಿಡಿಜೆ, ಬಿಡಿಇ, ಶ್ರೀ ಸಿದ್ಧೇಶ್ವರ ಹೈಸ್ಕೂಲ್ ಎಲ್ಲವೂಗಳು ಸಹ 70-100 ವರ್ಷದ ಹಿಂದೆ ಅಂದಿನ ಹಿರಿಯರು ತಮ್ಮ ತಲೆ ತಲಾಂತರದ ಆಸ್ತಿಯನ್ನು ಈ ನಾಡಿನ ಮಕ್ಕಳ ಭವಿಷ್ಯ ಒಳಿತಾಗಲಿ ಎಂದು ದಾನವಾಗಿ ನೀಡಿದ್ದರು. ಅದರ ಫಲವಾಗಿ ಅಂತಹ ಸಂಸ್ಥೆಗಳಲ್ಲಿ ಕಲಿತ ನಮ್ಮಂಥವರು ಉನ್ನತ ಹುದ್ದೆಗೆ ಹೋಗಲು ಸಾಧ್ಯವಾಯಿತು. ಅದಕ್ಕೆ ಕಾರಣರಾದ ಆ ಹಿರಿಯ ಚೇತನಗಳನ್ನು ಸದಾ ಸ್ಮರಿಸಬೇಕು ಎಂದು ಅವರು ತಿಳಿಸಿದರು.
ಮಹಾಂತೇಶ ಬಿರಾದಾರ ಮಾತನಾಡಿ, 1992-93ರಲ್ಲಿ ವಿಜಯಪುರ ಜಿಲ್ಲೆಯಿಂದ ಐಆರ್‌ಎಸ್ ಪಾಸಾದ ಮೊದಲ ವ್ಯಕ್ತಿ ಶ್ರೀನಿವಾಸ ಬಿದರಿ ಆಗಿದ್ದಾರೆ. 34 ವರ್ಷಗಳ ಸುದೀರ್ಘ ಸೇವೆಯಿಂದ ಇಂದು ಪ್ರಧಾನಮಂತ್ರಿ, ವಿತ್ತ ಮಂತ್ರಿಗಳ ಕಾರ್ಯಪಡೆಯಲ್ಲಿ ದೇಶದ ಆರ್ಥಿಕ ನೀತಿ ನಿರೂಪಣೆಗಳನ್ನು ನಿರ್ವಹಿಸುವ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರು ಇನ್ನೂ ಉನ್ನತ ಸ್ಥಾನಕ್ಕೆ ಅಲಂಕರಿಸಲಿ.
ಇದು ವಿಜಯಪುರದವರೆಲ್ಲರಿಗೂ ಹೆಮ್ಮೆಯ ಸಂಗತಿ. ದೇವರಗೆಣ್ಣೂರು ಎಂಬ ಪುಟ್ಟ ಹಳ್ಳಿಯಿಂದ ಬಂದಿರುವ ಅವರು, ಇಂದಿಗೂ ವಿಜಯಪುರಕ್ಕೆ ಬಂದರೆ, ಹಳ್ಳಿಯಲ್ಲಿಯೇ ಇರುತ್ತಾರೆ ಮತ್ತು ಹಳೆಯ ಗೆಳೆಯರೊಂದಿಗೆ ಸ್ಫೂರ್ತಿ ಫೌಂಡೇಷನ್ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಅವರ ಮಣ್ಣಿನ ಗುಣ ತೋರಿಸುತ್ತದೆ ಎಂದರು.
ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರವಿಂದ್ರ ಬಿಜ್ಜರಗಿ ಮಾತನಾಡಿ, ವಿಜಯಪುರದ ವರ್ತಕರ ಮತ್ತು ಎಪಿಎಂಸಿಗೆ ಸಂಬಂಧಿಸಿದ ಹಲವಾರು ವ್ಯಾಜ್ಯಗಳನ್ನು ಬಿದರಿ ಅವರ ಗಮನಕ್ಕೆ ತಂದಾಗ ಅವುಗಳಿಗೆ ನ್ಯಾಯಯುತ ಪರಿಹಾರ ದೊರಕಿಸಿದ್ದಾರೆ.
ಬಿದರಿ ಮನೆತನ ವಿಜಯಪುರಕ್ಕೆ ಉತ್ತಮ ಕೊಡುಗೆ ನೀಡಿದೆ. ರಾಮಪ್ಪ ಬಿದರಿ ಅವರು ಸಂಸದರಾಗಿ, ಡಾ. ಸಿ.ಆರ್. ಬಿದರಿ, ಡಾ. ಎಲ್.ಎಚ್. ಬಿದರಿ ವೈದ್ಯರಾಗಿ, ಆಶಾ ಬಿದರಿ ಸಾಮಾಜಿಕವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.
ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಅರುಣ ಹುಂಡೇಕಾರ, ಬಸವರಾಜ ಪಾಟೀಲ, ವಿಜಯ ಪಾಟೀಲ, ವಿಜಯ ಡೋಣಿ, ಪ್ರಕಾಶ ಹಕ್ಕಪಕ್ಕಿ, ಜಯಾನಂದ ತಾಳಿಕೋಟಿ, ಪ್ರವೀಣ ವಾರದ, ವೀರಣ್ಣ ಹುಂಡೇಕಾರ, ಆನಂದ ಮಂಗಳವೇಡೆ, ದಾದು ತಿವಾರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net