ಜು.11 ರಂದು ಮೆಗಾ ಲೋಕ ಅದಾಲತ್

ಎಂ.ಜಿ. ಲೋಕೇಶ್
ಎಂ.ಜಿ. ಲೋಕೇಶ್
Published on
ಅರಕಲಗೂಡು: ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜು.11 ರಂದು ಮೆಗಾ ಲೋಕ ಅದಾಲತ್ ಹಾಗೂ ಜು.18 ರಂದು ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಜಿ. ಲೋಕೇಶ್ ತಿಳಿಸಿದರು.
ಸಾರ್ವಜನಿಕರು ಹಾಗೂ ವಿವಿಧ ಪ್ರಕರಣಗಳ ಪಕ್ಷಗಾರರು ಈ ಲೋಕ ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಟ್ಟಣದ ನ್ಯಾಯಾಲಯದಲ್ಲಿ ಪ್ರಸ್ತುತ ಸೀನಿಯರ್ ಡಿವಿಜನ್‌ನಲ್ಲಿ 1,400 ಹಾಗೂ ಜೂನಿಯರ್ ಡಿವಿಜನ್‌ನ ಮೂರು ಕೋರ್ಟ್ ಗಳು ಸೇರಿ ಒಟ್ಟು ಸುಮಾರು 9,500 ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ ಹೆಚ್ಚಾಗಿ ಮೋಟಾರು ವಾಹನ ಅಪಘಾತ ಪರಿಹಾರ, ವೈವಾಹಿಕ ಸಮಸ್ಯೆಗಳು ಹಾಗೂ ಚೆಕ್ ಬೌನ್ಸ್ ಪ್ರಕರಣಗಳು ಸೇರಿವೆ. ಈಗಾಗಲೇ ವಕೀಲರು ಮತ್ತು ಪಕ್ಷಗಾರರೊಂದಿಗೆ ಮಾತುಕತೆ ನಡೆಸಲಾಗಿದ್ದು, ಹಲವು ಪ್ರಕರಣಗಳು ಇತ್ಯರ್ಥವಾಗುವ ಹಂತದಲ್ಲಿವೆ. ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ. 50 ರಷ್ಟು ರಿಯಾಯಿತಿ ಇರಲಿದ್ದು, ಲೋಕ ಅದಾಲತ್‌ನಲ್ಲಿ ಬಂದು ದಂಡ ಪಾವತಿಸಿದರೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಲೋಕ ಅದಾಲತ್ನಲ್ಲಿ ರಾಜಿ ಮಾಡಿಕೊಳ್ಳುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಕ್ಷಗಾರರು ಪಾವತಿಸಿರುವ ಸಂಪೂರ್ಣ ನ್ಯಾಯಾಲಯದ ಶುಲ್ಕವನ್ನು ಮರುಪಾವತಿ ಮಾಡಲಾಗುವುದು. ನ್ಯಾಯಾಲಯಗಳಲ್ಲಿ ಸುದೀರ್ಘ ಕಾಲ ಸಮಯ ವ್ಯರ್ಥ ಮಾಡುವ ಬದಲು ಸಾರ್ವಜನಿಕರು ಈ ಅದಾಲತ್‌ಗಳ ಸದುಪಯೋಗ ಪಡೆದುಕೊಂಡು ತಮ್ಮ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದರು. ಕಿರಿಯ ಶ್ರೇಣಿ ನ್ಯಾಯಾಧೀಶೆ ಚಂಪಾಶ್ರೀ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net