ಆನ್ ಲೈನ್ ಮೂಲಕ ಔಷಧ ಮಾರಾಟ ವಿರೋಧಿಸಿ ಪ್ರತಿಭಟನೆ: ರಾಮನಗೌಡ ದಾನಪ್ಪಗೌಡ್ರ

ಆನ್ ಲೈನ್ ಔಷಧ ಮಾರಾಟ ವಿರೋಧಿಸಿ ಪ್ರತಿಭಟನೆ ನಡೆಸುವ ಕುರಿತು ರಾಮನಗೌಡ ಅವರು ಸುದ್ದಿಗೋಷ್ಟಿ ನಡೆಸಿದರು.
ಆನ್ ಲೈನ್ ಔಷಧ ಮಾರಾಟ ವಿರೋಧಿಸಿ ಪ್ರತಿಭಟನೆ ನಡೆಸುವ ಕುರಿತು ರಾಮನಗೌಡ ಅವರು ಸುದ್ದಿಗೋಷ್ಟಿ ನಡೆಸಿದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಆನ್‌ಲೈನ್ ಇ-ಫಾರ್ಮಸಿ ಮೂಲಕ ಔಷಧಗಳ ಮಾರಾಟ ಮತ್ತು ಕಾರ್ಪೊರೇಟ್ ಕಂಪನಿಗಳು ನೀಡುತ್ತಿರುವ ಭಾರಿ ರಿಯಾಯಿತಿ ನೀತಿಯನ್ನು ವಿರೋಧಿಸಿ ಮೇ 20ರಂದು ಜಿಲ್ಲೆಯ 480 ಕ್ಕೂ ಹೆಚ್ಚು ಔಷಧಿ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಮನಗೌಡ ದಾನಪ್ಪಗೌಡ್ರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಸಂಸ್ಥೆಯು (AIOCD) ಈ ಪ್ರತಿಭಟನೆಗೆ ಕರೆ ನೀಡಿದ್ದು, ಜಿಲ್ಲಾ ಸಂಘವು ಇದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಹೊಂದಿಕೊಂಡಿರುವ ಮೆಡಿಕಲ್ ಶಾಪ್‌ಗಳನ್ನು ಹೊರತುಪಡಿಸಿ, ಜಿಲ್ಲೆಯ ಉಳಿದೆಲ್ಲಾ ಚಿಲ್ಲರೆ ಹಾಗೂ ಹೋಲಸೇಲ್ ಔಷಧ ಅಂಗಡಿಗಳು ಆ ದಿನ ಮುಚ್ಚಲಿವೆ ಎಂದು ತಿಳಿಸಿದರು.
ಔಷಧಿ ಅಂಗಡಿಗಳು ಸಾರ್ವಜನಿಕ ಜೀವನದಲ್ಲಿ ತನ್ನದೇ ಆದ ಚೌಕಟ್ಟಿನೊಳಗೆ ಸೇವೆಯನ್ನು ನೀಡುತ್ತ ಬಂದಿವೆ. ಕೋರೊನಾ ಸಂದರ್ಭದಲ್ಲಿ ವಿಶೇಷವಾಗಿ ಸೇವೆ ನೀಡಿವೆ ಎಂದು ಹೇಳಿದರು.
ಔಷಧಿ ಅಂಗಡಿಗಳಲ್ಲಿ ವೈದ್ಯರ ಶಿಫಾರಸ್ಸಿನ ಚೀಟಿಯಿಲ್ಲದೇ ಗ್ರಾಹಕರಿಗೆ ಆಂಟಿಬಯೋಟಿಕ್ ಹಾಗೂ ನಾರ್ಕೊಟಿಕ್ ಡ್ರಗ್ಸ್ ವಿತರಿಸಲಾಗುವುದಿಲ್ಲ. ಆದರೆ, ಇದನ್ನು ದುರ್ಬಳಕೆ ಮಾಡಿಕೊಂಡು ಆನ್‌ಲೈನ್ ಇ-ಫಾರ್ಮಸಿ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಆನ್‌ಲೈನ್ ಇ ಫಾರ್ಮಸಿ ಡಿಸ್ಕೌಂಟ್ ಮೂಲಕ ನಕಲಿ ಹಾಗೂ ಗುಣಮಟ್ಟವಲ್ಲದ ಔಷಧಿಗಳನ್ನು ವಿತರಿಸುವ ಸೇವೆಯನ್ನು ಬಂದ್ ಮಾಡುವಂತೆ ಆಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಔಷಧಿ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆಯಾದರೂ, ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಔಷಧಿ ವಿತರಣೆಗೆ ಸಂಘ ನಿಲುವು ಕೈಗೊಂಡಿದ್ದು ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಉಚಿತ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ತುರ್ತು ಚಿಕಿತ್ಸೆಗೆ ಔಷಧಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ. ರಮಣಿ, ಜ್ಞಾನೇಶ ಗೋಕಲೆ, ಪ್ರಭು ಕಾಬಳ್ಳಿ, ರಂಜಾನಸಾಬ ನದಾಫ್, ಸುರೇಶ ನಿಡಗುಂಡಿ, ಸದಾನಂದ ಚವಡಿ, ಜಗದೀಶ ಹಿರೇಮಠ ಸೇರಿ ಅನೇಕರು ಇದ್ದರು.
ಕೋಟ್
ಮೇ 20ರಂದು ಜಿಲ್ಲೆಯಲ್ಲಿನ 480ಕ್ಕೂ ಹೆಚ್ಚು ಔಷಧಿ ಅಂಗಡಿಗಳು ಬಂದ್ ಆಗಲಿದ್ದು, ತುರ್ತು ಸೇವೆಗೆ ಮಾತ್ರ ಸೌಲಭ್ಯ ಕಲ್ಪಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಸಂಘವನ್ನು ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಬಹುದು.
- ರಾಮನಗೌಡ ದಾನಪ್ಪಗೌಡ್ರ, ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net