ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಕೆ. ಶಿವಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್, 4,873 ಎಕರೆಯಲ್ಲಿ ಕ್ವಿನ್ ಸಿಟಿ ಅಸ್ತಿತ್ವಕ್ಕೆ ಬರುತ್ತಿದೆ. ಈಗ ಮೊದಲ ಹಂತದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಟೊಯೊಟಾ ಕಂಪನಿಯು ತನ್ನ ತವರಾಗಿರುವ ಜಪಾನಿನಲ್ಲಿ ಕೂಡ ಹೊಂದಿಲ್ಲದಂತಹ ಅತ್ಯುತ್ಕೃಷ್ಟ ನಾವೀನ್ಯತಾ ಕೇಂದ್ರವನ್ನು ಇಲ್ಲಿ ಸ್ಥಾಪಿಸುತ್ತಿದೆ. ಜಾಗತಿಕ ಮಟ್ಟದ ವೈದ್ಯಕೀಯ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕಾನೂನು ಶಾಲೆಯ ಕ್ಯಾಂಪಸ್ ಕೂಡ ಇಲ್ಲಿ ಬರಲಿವೆ. ಜಾಗತಿಕವಾಗಿ 2ನೇ ಶ್ರೇಯಾಂಕ ಹೊಂದಿರುವ ಲಂಡನ್ನಿನ ಇಂಪೀರಿಯಲ್ ಕಾಲೇಜು, 19ನೇ ಶ್ರೇಯಾಂಕದ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿವಿ, 139ನೇ ಸ್ಥಾನದಲ್ಲಿರುವ ಲಿವರ್ ಪೂಲ್ ವಿವಿ, 164ನೇ ಸ್ಥಾನದಲ್ಲಿರುವ ಲ್ಯಾಂಕಾಸ್ಟರ್ ವಿವಿ, 241ನೇ ಸ್ಥಾನದಲ್ಲಿರುವ ಲಾ ಟ್ರೋಬ್ ವಿವಿ ಮತ್ತು 374ನೇ ಸ್ಥಾನದಲ್ಲಿರುವ ಫ್ಲಿಂಡರ್ಸ ವಿವಿ ರಾಜ್ಯ ಸರ್ಕಾರದೊಂದಿಗೆ ಈಗಾಗಲೇ ಒಡಂಬಡಿಕೆಗೆ ಅಂಕಿತ ಹಾಕಿವೆ ಎಂದು ವಿವರಿಸಿದರು.