ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿ

ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸಂಘ, ಸಂಸ್ಥೆಗಳನ್ನೊಳಗೊಂಡ ಹೋರಾಟ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದ ಸಂದರ್ಭ
ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸಂಘ, ಸಂಸ್ಥೆಗಳನ್ನೊಳಗೊಂಡ ಹೋರಾಟ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದ ಸಂದರ್ಭ
Published on

ಸಿದ್ದಾಪುರ:

ಮಾಲ್ದಾರೆ, ಸಿದ್ದಾಪುರ, ನೆಲ್ಯಹುದಿಕೇರಿ ಹಾಗೂ ಸುತ್ತಮುತ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ, ಜಿಲ್ಲಾ ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ವಿವಿಧೆಡೆ ಸೋಮವಾರ ಪ್ರತಿಭಟನೆ ನಡೆಸಿದರು.


ಸಿದ್ದಾಪುರ, ನೆಲ್ಯಹುದಿಕೇರಿ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಹೋರಾಟಗಾರರು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ರಾಜ್ಯ ಅರಣ್ಯ ಸಚಿವರಿಗೆ ಮನವಿ ಪತ್ರ ರವಾನಿಸಿದರು. ಹಲವು ವರ್ಷಗಳಿಂದ ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳ ದಾಳಿಯಿಂದ ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಜೀವ ಕಳೆದುಕೊಂಡಿದ್ದು, ಹಲವರು ಅಂಗವಿಕಲರಾಗಿದ್ದಾರೆ. ನಿರಂತರ ಬೆಳೆಹಾನಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತೋಟ ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ದಿನದೂಡುವಂತಾಗಿದೆ ಎಂದು ಮನವಿಯಲ್ಲಿ ಅಲವತ್ತುಕೊಂಡಿದ್ದಾರೆ.


ಅರಣ್ಯ ಇಲಾಖೆ ವೈಜ್ಞಾನಿಕ ಅರಣ್ಯ ನೀತಿಯನ್ನು ತಕ್ಷಣ ಜಾರಿಗೊಳಿಸಬೇಕು. ಜನವಸತಿ ಹಾಗೂ ತೋಟ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ಏಕಕಾಲದಲ್ಲಿ ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ನಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾರ್ಯಾಚರಣೆ ಮೂಲಕ ಸೆರೆಹಿಡಿದು ಮಾನವ ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ಆ.28ರಂದು ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಚಿವರು ನೇರವಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಮನವಿ ಪತ್ರದ ಪ್ರತಿಗಳನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಮೈಸೂರು ಕೊಡಗು ಲೋಕಸಭಾ ಸದಸ್ಯರು, ವಿರಾಜಪೇಟೆ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ರವಾನಿಸಲಾಗಿದೆ.


ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಎ.ಭರತ್, ಕರ್ನಾಟಕ ಪ್ರಾಂತ ರೈತ ಸಂಘಟನೆಯ ಟಿ.ಟಿ.ಉದಯಕುಮಾರ್, ರಾಜ್ಯ ರೈತ ಸಂಘ (ಹಸಿರು ಸೇನೆ)ಯ ಹಡಗದ್ದೆ ಮಾದಪ್ಪ, ಕರವೇಯ ಸುರೇಶ್, ರಾಜ್ಯ ರೈತ ಸಂಘದ ಎಂ.ಸಿ. ಚಂದ್ರಕುಮಾರ್, ಪೀಟರ್, ಆಟೋ ಚಾಲಕರ ಸಂಘದ ಪಿ.ಆರ್.ವಿನೋದ್, ನೆಲ್ಯಹುದಿಕೇರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಬಷೀರ್, ಆದಿವಾಸಿ ಸಂಘಟನೆಯ ರವಿ, ಜೀಪು ಚಾಲಕರ ಸಂಘಟನೆಯ ಮೋನಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net