ಕಲಬುರಗಿ: ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಪದಗ್ರಹಣ ಮಾಡಿದ ಡಿಕೆ ಶಿವಕುಮಾರ್ ನಾಡಿನ ಸಮಗ್ರ ಕಲ್ಯಾಣಕ್ಕೆ ಧ್ವನಿ ಆಗಲಿ ಮತ್ತು ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯಲ್ಲಿ ಆರು ತಿಂಗಳ ಹಿಂದೆ ಕೈಗೊಂಡ ಪ್ರಾರ್ಥನೆಗೆ ಫಲ ಸಿಕ್ಕಿದೆ ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಜ್ಯಾಧ್ಯಕ್ಷರು ಮತ್ತು ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಡಾ. ಪ್ರಣವಾನಂದ ಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಲೋಕ ಭವನದ ಗಾಜಿನ ಮನೆಯಲ್ಲಿ ಬುಧವಾರ ನಡೆದ ನೂತನ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಶಾಲು ಹಾಕಿ ಸತ್ಕರಿಸಿದ ನಂತರ ಮಾತನಾಡಿ ಕಳೆದ ಆರು ತಿಂಗಳ ಹಿಂದೆ ಯಾವೊಬ್ಬ ಶಾಸಕರು ಕೂಡ ಡಿಕೆಶಿ ಸಿಎಂ ಆಗಲಿ ಎಂಬ ಕೂಗನ್ನು ಎಬ್ಬಿಸದ ವೇಳೆಯಲ್ಲಿ ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯಲ್ಲಿ ಡಿಕೆಶಿ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಪ್ರಾರ್ಥನೆ ಮಾಡಿ ಒತ್ತಾಯ ಹೇರಿದ ಪರಿಣಾಮವಾಗಿ ಇದೀಗ ಆ ಪ್ರಾರ್ಥನೆಗೆ ಜಯ ಸಿಕ್ಕಿದೆ ಎಂದು ಡಾ. ಪ್ರಣವಾನಂದ ಶ್ರೀಗಳು ನಂತರ ಮಾಧ್ಯಮದವರಿಗೆ ತಿಳಿಸಿದರು. ನೂತನ ಮುಖ್ಯಮಂತ್ರಿಗಳು ಅತಿ ಹಿಂದುಳಿದ ಸಮುದಾಯದವರಿಗೂ ಮನ್ನಣೆ ನೀಡಿ ನಾಡಿನ ಸಮಗ್ರ ಅಭಿವೃದ್ಧಿಗೆ ನಾಯಕತ್ವ ವಹಿಸಲಿ. ಅವರ ಅವಧಿಯಲ್ಲಿ ರಾಜ್ಯವು ಎಲ್ಲಾ ರಂಗಗಳಲ್ಲಿ ಮುಂಚೂಣಿಗೆ ಬಂದು ರಾಷ್ಟ್ರದಲ್ಲೆ ಅತ್ಯಂತ ಉನ್ನತ ಸ್ಥಾನಕ್ಕೇರಲಿ ಎಂದು ಅವರು ಶುಭ ಹಾರೈಸಿದರು.