ಕುರುಬ ಸಮುದಾಯದ ನಾಯಕರು ಬೆಳೆಯಲಿ: ಎಚ್.ಎಂ.ರೇವಣ್ಣ ಆಶಯ-H M Revanna

ಕುರುಬ ಸಮುದಾಯದ ನಾಯಕರನ್ನು ಬೆಳೆಸುವ ಕೆಲಸವಾಗಲಿ
ಕುರುಬ ಸಮುದಾಯದ ನಾಯಕರನ್ನು ಬೆಳೆಸುವ ಕೆಲಸವಾಗಲಿ
Published on
ಬೆಂಗಳೂರು: ಕುರುಬ ಸಮುದಾಯದ ನಾಯಕರನ್ನು ಬೆಳೆಸುವ ಕೆಲಸವಾಗಬೇಕು. ಪಕ್ಷ ಅಥವಾ ಸಮುದಾಯ ಅಂತ ಬಂದಾಗ ನಾನು ಸಮಾಜದ ಪರವಾಗಿ ಕೆಲಸ ಮಾಡುತ್ತೇನೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ಹಾಲುಮತ ಉದ್ಯಮಿಗಳ ಸಂಘ, ಭಾನುವಾರ ಆಯೋಜಿಸಿದ್ದ ‘ಕನಕೋದ್ಯಮಿಗಳ ಸಮ್ಮಿಲನ’ ಹಾಗೂ ‘ಉದ್ಯಮಿಗಳಿಗೆ ಅವಕಾಶಗಳ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನಕದಾಸರ ಜಯಂತಿ ಆಚರಣೆ ಮಾಡಿದ ಪರಿಣಾಮ ನಮ್ಮ ಸಮುದಾಯ ಸಂಘಟಿತವಾಗಿದೆ. ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಾನು ಕುರುಬ ಸಮುದಾಯವನ್ನು ಸಂಘಟಿಸುವ ಕೆಲಸ ಮಾಡುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ. ಎಲ್ಲ ಪಕ್ಷಗಳಲ್ಲಿ ನಮ್ಮ ಸಮುದಾಯದ ನಾಯಕರಿದ್ದಾರೆ. ಕುರುಬ ಸಮಾಜ ಸಂಘಟಿತವಾಗಿರುವ ಕಾರಣ ಎಲ್ಲ ರಾಜಕೀಯ ಪಕ್ಷಗಳು ನಮ್ಮ ಸಮುದಾಯವನ್ನು ಸೆಳೆಯಲು ಮುಂದಾಗಿವೆ ಎಂದರು.
ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ನಮ್ಮ ಸಮುದಾಯದ ಉದ್ಯಮಿಗಳಿಗೆ ಸರ್ಕಾರದ ಅನೇಕ ಸೌಲಭ್ಯಗಳು ದೊರೆಯುತ್ತಿದ್ದವು. ಈ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದೆ. ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಹಂಚಿಕೆ ಮಾಡುವ ನಿವೇಶನಗಳಲ್ಲಿ ಕುರುಬ ಸಮುದಾಯಕ್ಕೆ ಕೆಲ ನಿವೇಶನಗಳನ್ನು ಮೀಸಲಿಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಜಾರಿಗೊಳಿಸಲು ಹೊರಟಿರುವ ನೂತನ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವಂತೆ ಪೀಣ್ಯ ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ಆರ್. ಶಿವಕುಮಾರ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎಚ್.ಎಂ.ರೇವಣ್ಣ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಶ್ರೀಕಾಗಿನೆಲೆ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಸಂಘದ ಅಧ್ಯಕ್ಷ ಸುನೀಲ್ ಜಯರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net