ವಿಜಯಪುರದ ಶ್ರೀ ಕೃಷ್ಣ ವಾದಿರಾಜ ಮಠದಲ್ಲಿ ವಿದ್ಯಾರ್ಥಿ ನಿಲಯದ ಭೂಮಿ ಪೂಜೆ ನೆರವೇರಿಸಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಗೋಪಾಲ ನಾಯಕ, ಡಾ. ಮಂಗಲಗಿ ಇದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿಕೆ
ವಿದ್ಯಾರ್ಥಿನಿಲಯದ ಭೂಮಿ ಪೂಜೆ
ವಿಜಯಪುರ: ದೇಶ ಸಮೃದ್ಧಿಯತ್ತ ಸಾಗಬೇಕಾದರೆ ರಾಮರಾಜ್ಯದ ಕನಸು ನನಸಾಗಬೇಕು ಎಂದು ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ನಗರದ ಶ್ರೀ ಕೃಷ್ಣ ವಾದಿರಾಜ ಮಠದ ಆವರಣದಲ್ಲಿ ಶುಕ್ರವಾರ ಅಂದಾಜು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿದ್ಯಾರ್ಥಿ ನಿಲಯದ ಭೂಮಿ ಪೂಜೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಅನುಕೂಲ ಕಲ್ಪಿಸಲು ಹಿರಿಯ ಸ್ವಾಮಿಗಳು ಆರು ದಶಕದ ಹಿಂದೆ ನಿರ್ಮಿಸಿದ ವಿದ್ಯಾರ್ಥಿ ನಿಲಯ ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ಆಧುನಿಕರಣಗೊಳಿಸಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಸಮಸ್ತ ಬಡವರಿಗೂ ನೂತನ ಕಟ್ಟಡ ನಿರ್ಮಿಸಿ ಕೊಡುವ ಯೋಜನೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿದ್ದಾರೆ. ಅಲ್ಲದೇ, ಕಟ್ಟಡ ನಿರ್ಮಾಣಕ್ಕೆ ಸಂಸದ ರಮೇಶ ಜಿಗಜಿಣಗಿ ಅವರೂ ಅನುದಾನ ಬಿಡುಗಡೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.
ಶ್ರೀಮಠದ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ, ಪೇಜಾವರ ಮಠಕ್ಕೂ ವಿಜಯಪುರ ಜಿಲ್ಲೆಯ ಜನರಿಗೂ ಅವಿನಾಭಾವ ಸಂಬಂಧವಿದೆ. ಹಿರಿಯ ಸ್ವಾಮಿಗಳು 1964 ರಲ್ಲಿ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ಕಟ್ಟಿದರು. 1972 ರಲ್ಲಿ ಬರಗಾಲ ಬಿದ್ದಾಗ ಸಿಂದಗಿ ತಾಲೂಕಿನ ಗ್ರಾಮಗಳಿಗೆ ಗಂಜಿ ಕೇಂದ್ರ ತೆರೆದರು. ಚಿಕ್ಕಪಡಸಲಗಿ ಬಾಂದಾರ ನಿರ್ಮಾಣಕ್ಕೆ ಶ್ರಮದಾನ ಮಾಡಿದ್ದರು. ಅಲ್ಲದೆ, ಸದಾ ವಿಜಯಪುರ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಎಂದು ತಿಳಿಸಿದರು.
ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡಲು ಸಂಕಲ್ಪಗೈದ ಗಿರೀಶ ಕುಲಕರ್ಣಿ ಹಾಗೂ ಡಾ. ಢಾಣಕ ಶಿರೂರ, ಗುರುರಾಜ ಸೊಂಡೂರ ಅವರನ್ನು ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮಠದ ಸದಸ್ಯರಾದ ಡಾ. ಮಂಗಲಗಿ, ಡಾ. ಮಲಘಾಣ, ಅಶೋಕರಾವ್ ಪದಕಿ, ವಿ.ಬಿ. ಕುಲಕರ್ಣಿ, ಗೋವಿಂದ ಜೋಶಿ, ವಿಕಾಸ ಪದಕಿ ವಿಜಯ ಜೋಶಿ, ಪ್ರಾಣೇಶ ಜಹಾಗೀರದಾರ ಮತ್ತಿತರರಿದ್ದರು.