

ನಾಪೋಕ್ಲು: ಗ್ರಾಮೀಣ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಯುವಜನರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಶಾಸಕ ಎ.ಎಸ್.ಪೊನಣ್ಣ ಹೇಳಿದರು.
ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಯುವ ಒಕ್ಕೂಟದ ಸಹಯೋಗದಲ್ಲಿ ಭಾಗಮಂಡಲದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ಆಯೋಜಿಸಿದ್ದ 34ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಎಲ್ಲೆಡೆಯಿಂದ ಕ್ರೀಡಾಪಟುಗಳು ಇಲ್ಲಿಗೆ ಆಗಮಿಸಿರುವುದು ಹೆಮ್ಮೆಯ ವಿಷಯ. ಇಂತಹ ಕ್ರೀಡಾಕೂಟಗಳಿಂದ ಗ್ರಾಮೀಣ ಕ್ರೀಡೆಯ ಸೊಬಗು ಜೀವಂತವಾಗಿರಲು ಹಾಗೂ ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಲು ಸಹಕಾರಿಯಾಗಿದೆ ಎಂದರು.
ವಿಧಾನಸಭೆ ಮಾಜಿ ಸ್ವೀಕರ್ ಕುಂಬಾರನ ಜಿ.ಬೋಪಯ್ಯ, ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಗೆಲುವಿಗಾಗಿ ಭಾಗವಹಿಸುವುದು ಮುಖ್ಯವಲ್ಲ ಎಂದರು.
ಕಾಡು ಪ್ರಾಣಿಗಳ ಹಾವಳಿ ಹಾಗೂ ಕಾರ್ಮಿಕರ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಭತ್ತದ ಬೇಸಾಯ ಕುಂಠಿತಗೊಂಡಿದ್ದು, ಗದ್ದೆಗಳು ಪಾಳು ಬಿದ್ದಿವೆ. ಆದರೂ ಇಂತಹ ಕ್ರೀಡಾಕೂಟ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ , ಮಡಿಕೇರಿ ಡಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿಸ್ಮಯ್ ಚಕ್ರವರ್ತಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಭಾಗಮಂಡಲ ಗ್ರಾಪಂ ಮಾಜಿ ಅಧ್ಯಕ್ಷ ಕಾಳನ ರವಿ, ಭಾಗಮಂಡಲ ವಿಎಸ್ಸೆಸ್ಸೆನ್ ಅಧ್ಯಕ್ಷ ಹೊಸೂರು ಸತೀಶ ಜೋಯಪ್ಪ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್, ಶ್ರೀ ಕೃಷ್ಣ ಯುವಕ ಸಂಘದ ಅಧ್ಯಕ್ಷ ಲತೇಶ್, ನಿವೃತ್ತ ಶಿಕ್ಷಕ ಶ್ರೀಧರ್, ಜಿಲ್ಲಾ ಯುವ ಒಕ್ಕೂಟದ ಖಜಾಂಚಿ ಕುಂಜಿಲನ ಮಧು ಮೋಹನ್, ಸದಸ್ಯ ಜಯಕುಮಾರ್, ಬಲ್ಲಮಾವಟ್ಟಿ ಗ್ರಾಪಂ ಮಾಜಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಮುದ್ದಿಯಂಡ ಸಾಕ್ಷಿ ಕಾವೇರಮ್ಮ, ಬಾಳಾಡಿ ದೀಪಕ್ ಕುಮಾರ, ಜಿಲ್ಲಾ ಯುವ ಒಕ್ಕೂಟದ ಕಾರ್ಯಾಧ್ಯಕ್ಷ ಕೂಡಂಡ ಸಾಬು ಸುಬ್ರಮಣಿ, ತಾಲೂಕು ಉಪಾಧ್ಯಕ್ಷ ಕೇಕಡ ಇಂದುಮತಿ ಇತರರು ಇದ್ದರು. ವಿಜೇತರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು.