

ದೇವನಹಳ್ಳಿ :
ಲಂಚಮುಕ್ತ ಸಮಾಜ ನಿರ್ಮಾಣಕ್ಕಾಗಿ ಮಕ್ಕಳು ವಿದ್ಯಾರ್ಥಿದೆಸೆಯಲ್ಲೇ ಸರಸ್ವತಿ, ಲಕ್ಷಿ$್ಮ ಇಬ್ಬರನ್ನೂ ಒಲಿಸಿಕೊಳ್ಳಬೇಕು. ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಿರಿಯರ ಬಗ್ಗೆ ಗೌರವ, ಪೂಜ್ಯ ಭಾವನೆ ಬೆಳೆಸಿಕೊಳ್ಳಬೇಕು, ಸುತ್ತಮುತ್ತಲಿನ ಪರಿಸರವನ್ನು ಪ್ರೀತಿಸಬೇಕು ಎಂದು ಬನಶಂಕರಿ ಮಹಿಳಾ ಮಂಡಳಿ ಅಧ್ಯೆ ಶಾಂತಾ ರಾಮಸ್ವಾಮಿ ಕಿವಿಮಾತು ಹೇಳಿದರು.
ಬಾಲೆಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಬನಶಂಕರಿ ಮಹಿಳಾ ಮಂಡಳಿಯಿಂದ ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ, ನೀರಿನ ಬಾಟಲಿ ಹಾಗೂ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದರು. ಮಕ್ಕಳು ಶಾಲೆಗಳಲ್ಲಿನ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶ ನೀಡಬೇಕು ಎಂದು ತಿಳಿಸಿದರು.
ವಿಜಯವಾಣಿ ಪ್ರಸರಣ ವಿಭಾಗದ ಮುಖ್ಯ ವ್ಯವಸ್ಥಾಪಕ ವಿದ್ಯಾಧರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ರ್ಯಾಂಕ್ ಪಡೆಯುವುದು ಬೇರೆ, ಸಮಾಜವನ್ನು ಎದುರಿಸುವ ಜೀವನ ಬೇರೆ. ವಿದ್ಯಾರ್ಥಿ ಸಮಾಜವನ್ನು ಎದುರಿಸುವ ಹಾಗೂ ಸಮಾಜದೊಂದಿಗೆ ಇರುವ ಸವಾಲುಗಳೊಂದಿಗೆ ಜೀವಿಸಬೇಕು ಎಂದರು.
ಬೆಂಗಳೂರಿನ ರಾಯಲ್ ಪಿಯು ಕಾಲೇಜಿನ ದೇವರಾಜ್ ಮಾತನಾಡಿ, ಪ್ರತಿ ವರ್ಷವೂ ನಮ್ಮ ಕಾಲೇಜಿನಿಂದ 10 ವಿದ್ಯಾರ್ಥಿಗಳಿಗೆ ಉಚಿತವಾಗಿ ಯಾವುದೇ ಶುಲ್ಕವಿಲ್ಲದೆ, ಅನಾಥ ಮಕ್ಕಳಿಗೆ, ಆಟೋ ಚಾಲಕರ ಮಕ್ಕಳಿಗೆ, ಪೌರಕಾರ್ಮಿಕರ ಮಕ್ಕಳಿಗೆ ಐಎಎಸ್, ಐಪಿಎಸ್ ಹಾಗೂ ಸಿಎ ಕೋಚಿಂಗ್ ನೀಡಲಾಗುತ್ತಿದೆ. ಬಾಲೆಪುರ ಶಾಲೆ ಮಕ್ಕಳಿಗೂ ಸೌಲಭ್ಯ ಕಲ್ಪಿಸಿ ಕೊಡುವುದಾಗಿ ತಿಳಿಸಿದರು.
ಜೀವನದಲ್ಲಿ ಗುರು ಭಕ್ತಿ, ಸತತ ಪ್ರಯತ್ನ ಮತ್ತು ಶ್ರದ್ಧೆ ಇರಬೇಕು. ಅಂತರಂಗದಲ್ಲಿ ಭಾವೈಕ್ಯತೆ ಇರಬೇಕು. ಸಿಗುವ ಅವಕಾಶಗಳನ್ನು ಬಳಸಿಕೊಂಡು ಗುರಿ ತಲುಪಲು ವಿದ್ಯಾರ್ಥಿ ದೆಸೆಯಿಂದಲೇ ತಯಾರಿ ಮಾಡಿಕೊಳ್ಳಬೇಕು. ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಸಲಹೆ ನೀಡಿದರು.