ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಂತಾಗಲಿ

ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ
  • ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್ ಅವರ ನಿವಾಸ
ಚನ್ನರಾಯಪಟ್ಟಣ: ಹೇಮಾವತಿ ಸಕ್ಕರೆ ಕಾರ್ಖಾನೆಯ ಚುನಾವಣೆ ಸೇರಿದಂತೆ ಮುಂಬರುವ ಗ್ರಾಮ, ಜಿಲ್ಲಾ ತಾಲೂಕು ಪಂಚಾಯಿತಿ ಚುನಾವಣೆ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರ ನಾಯಕತ್ವದಲ್ಲಿ ನಡೆಯಲಿ ಎಂದು ತಾಲೂಕಿನ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಹೇಮಾವತಿ ಸಕ್ಕರೆ ಕಾರ್ಖಾನೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್ ಅವರ ನಿವಾಸದಲ್ಲಿ ಆಯೋಜಿಸಿದ್ದ ತಾಲೂಕಿನ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.
ಮುಂಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆ ಗೆಲ್ಲುವಂತೆ ನೋಡಿಕೊಳ್ಳಬೇಕು. ಇದರ ನೇತೃತ್ವವನ್ನು ಎಂ.ಎ.ಗೋಪಾಲಸ್ವಾಮಿ ಅವರಿಗೆ ವಹಿಸಲಿ. ಅಲ್ಲದೆ ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ಲಲಿತ್ ರಾಘವ್ (ದೀಪು) ಪಕ್ಷ ಸಂಘಟನೆಗೆ ಹೆಚ್ಚಿನ ಸಹಕಾರ ನೀಡಲಿ ಎಂದು ಎಚ್.ಎಸ್.ವಿಜಯಕುಮಾರ್ ಹೇಳಿದರು.
ತಾಲೂಕಿನಲ್ಲಿ ಕಾಂಗೆಸ್ ಬಲವರ್ಧನೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು. ಅಲ್ಲದೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿ ಹೋಗುವಂತೆ ಒಗ್ಗಟಿನಿಂದ ಶ್ರಮಿಸಬೇಕಿದೆ. ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಬೂತ್ ಮಟ್ಟದಲ್ಲಿ ಹಣ ಸಂಗ್ರಹಿಸುವ ಮೂಲಕ ಅತಿ ಜರೂರಾಗಿ ಭವನ ನಿರ್ಮಿಸಬೇಕಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರ ಸಲಹೆಯಂತೆ ತಾಲೂಕಿನ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವಂತೆ ಮಾಡಬೇಕು ಎಂದರು.
ತಾಲೂಕು ಕೇಂದ್ರದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ತಾಲೂಕಿನ ಪಕ್ಷದ ಮುಖಂಡರು, ಕಾರ್ಯಕರ್ತರು ಭವನ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮುಂಬರುವ ಹೇಮಾವತಿ ಸಕ್ಕರೆ ಕಾರ್ಖಾನೆ ಚುನಾವಣೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ನನ್ನ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕೆಂದು ತಾಲೂಕಿನ ನಾಯಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಎಲ್ಲರ ಸಲಹೆ, ಸಹಕಾರ ಪಡೆಯುವುದರ ಜತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಎಂ.ರಾಮಚಂದ್ರು, ಎಂ.ಕೆ.ಮಂಜೇಗೌಡ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಶಂಕರ್, ಉದಯ್‌ಕುಮಾರ್ ಇತರರಿದ್ದರು.
ಫೋಟೋ ಸುದ್ದಿ 21 ಸಿಆರ್‌ಪಿ-2ಎ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net