ಅವ್ಯವಸ್ಥೆ ಪ್ರಶ್ನಿಸಿದ್ದ ಮಹಿಳೆಗೆ ಧಮ್ಕಿ !
| ಕರ ವಸೂಲಿಗಾರರ ಮೇಲೆ ದೂರು ದಾಖಲು
ಚಿಕ್ಕೋಡಿ:
ಇಲ್ಲಿನ ಗಾಂಧಿ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿದ್ದ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ಮಹಿಳೆ ಸಂಗೀತಾ ಚಾವರೆ ಮಾರುಕಟ್ಟೆಯಲ್ಲಿ ಸ್ವಚ್ಚತೆ ಇಲ್ಲದೇ ಇರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವುದಕ್ಕೆ ಮಹಿಳೆಗೆ ಧಮ್ಕಿ ಹಾಕಿದ್ದ ಜಕಾತಿ(ತೆರಿಗೆ) ವಸೂಲಿಗಾರರ ಮೇಲೆ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣ ಝಾರಿ ಗಲ್ಲಿ ನಿವಾಸಿ ಸೋಹೆಲ್ ಭಾಗವಾನ, ನವಾಜ್ ತಹಶಿಲ್ದಾರ್, ಸೋಹೆಲ್ ಶೇಖ್ ಎಂಬುವವರ ಮೇಲೆ ದೂರದಾಖಲಿಸಲಾಗಿದೆ. ಮಹಿಳೆ ಮಾರುಕಟ್ಟೆಯ ಅವ್ಯವಸ್ಥೆ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ಮೇಲೆ ಆಕ್ರೋಶಗೊಂಡ ಆರೋಪಿಗಳು ಮಹಿಳೆಗೆ ಅವಾಚ್ಚ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಚಿಕ್ಕೋಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.