

ದೊಡ್ಡಬಳ್ಳಾಪುರ :
ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಎಂಬುದು ಅತ್ಯಂತ ಸರಳ, ಕಡಿಮೆ ವೆಚ್ಚದ ಮತ್ತು ಮೂಢನಂಬಿಕೆ ರಹಿತ ವಿವಾಹ ಪದ್ಧತಿಯಾಗಿದೆ ಎಂದು ಹಿರಿಯ ಸಾಹಿತಿ ಮತ್ತು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ತಿಳಿಸಿದರು.
ದೊಡ್ಡ ಬೆಳವಂಗಲ ಹೋಬಳಿಯ ಹುಲುಕುಡಿಬೆಟ್ಟದ ಸಮೀಪವಿರುವ ಮಾಡೇಶ್ವರ ಗ್ರಾಮದ ಹಳ್ಳಿ ಮಂಟಪದಲ್ಲಿ ಆಯೋಜಿಸಿದ್ದ ಸಿ.ಎಚ್. ಭರತ್ ಕುಮಾರ್ ಮತ್ತು ಕೆ.ಟಿ. ಲತಾ ಅವರ ಮಂತ್ರಮಾಂಗಲ್ಯ ವಿವಾಹದಲ್ಲಿ ವಧುವರರಿಗೆ ಮಂತ್ರ ಮಾಂಗಲ್ಯ ಬೋಧನೆ ಮಾಡಿ ಮಾತನಾಡಿದರು.
ಜಾತಿ, ಧರ್ಮ, ಆಡಂಬರ ಹಾಗೂ ಪುರೋಹಿತಶಾಹಿ ಆಚರಣೆಗಳನ್ನು ಮೀರಿ ನಿಂತ ಮಂತ್ರ ಮಾಂಗಲ್ಯ ಪದ್ಧತಿಯು ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುತ್ತದೆ. ವಧು&ವರರು ಕನ್ನಡದಲ್ಲೇ ಪರಸ್ಪರ ಪ್ರೀತಿ, ಸಮಾನತೆ ಮತ್ತು ಜವಾಬ್ದಾರಿಗಳ ಪ್ರಮಾಣ ವಚನ ಸ್ವೀಕರಿಸುವುದು ಮಂತ್ರ ಮಾಂಗಲ್ಯದ ವಿಶೇಷವಾಗಿದೆ ಎಂದರು.
ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಕುವೆಂಪು ಅವರ ವಿಚಾರಧಾರೆಗಳು ಪ್ರಸ್ತುತವಾಗಿವೆ. ಜಾತಿ, ಮೂಢನಂಬಿಕೆ ಮತ್ತು ಅಸಮಾನತೆ ಹೆಚ್ಚುತ್ತಿರುವ ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಕುವೆಂಪು ಅವರ "ವಿಶ್ವಮಾನವ ಸಂದೇಶ', ವೈಚಾರಿಕತೆ, ಮತ್ತು ಮಂತ್ರ ಮಾಂಗಲ್ಯದಂತಹ ಆಲೋಚನೆಗಳು ಯುವ ಸಮುದಾಯಕ್ಕೆ ಸದಾ ಮಾರ್ಗದರ್ಶಕವಾಗಿ ಇರುತ್ತವೆ ಎಂದರು.
ಕವಯಿತ್ರಿ, ನಿರೂಪಕಿ ಕೆ.ಟಿ.ಲತಾ ರಚಿಸಿರುವ. "ನಿನ್ನನ್ನೇಕೆ ಆಯ್ದುಕೊಂಡೆ' ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಪ್ರಗತಿಪರ ಚಿಂತಕಿ ಇಂದಿರಾ ಕೃಷ್ಣಪ್ಪ , ಕಾವ್ಯದ ಭಾಷೆ ಮತ್ತು ಭಾವವು ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಿರಬೇಕು. ಸಾಮಾನ್ಯ ಜನರ ನೋವು&ನಲಿವು, ಬದುಕು ಹಾಗೂ ಸಾಮಾಜಿಕ ಸ್ಪಂದನೆಗೆ ಕನ್ನಡಿಯಾಗಿ ಕಾವ್ಯ ಜನಮುಖಿ ಆಗಿರಬೇಕು ಎಂದರು.