ಮಧುಗಿರಿ: ಡಿಜಿಟಲ್ ಯುಗದಲ್ಲಿ ಯುವಜನತೆ ವಿದ್ಯಾರ್ಥಿ ದೆಸೆಯಲ್ಲೇ ತಮ್ಮ ಸಾಮಾಜಿಕ ಮಾಧ್ಯಮವನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಡಿ.ಎಸ್.ಮುನೀಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಮಧುಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ಐಕ್ಯೂಎಸಿ, ಎನ್ಎಸ್ಎಸ್, ಪ್ಲೇಸ್ ಮೆಂಟ್ ಸೆಲ್, ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ "ಡಿಜಿಟಲ್ ಮಾಧ್ಯಮ, ಸವಾಲು ಮತ್ತು ಸಾಧ್ಯತೆಗಳು' ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಸಂಪರ್ಕ ಗಟ್ಟಿಗೊಳಿಸಲು ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು, ಸಾಮಾಜಿಕ ಜಾಲತಾಣದಿಂದ ಸಾಮಾಜಿಕ ಸಂಪರ್ಕ ಬೆಳೆಯುವುದಿಲ್ಲ. ಡಿಜಿಟಲ್ ಮಾಧ್ಯಮದಲ್ಲಿ ಕಂಟೆಟ್ ಕ್ರಿಯೇಟ್ ಮಾಡಲು ಮುಕ್ತ ಅವಕಾಶವಿರುವುದರಿಂದ ಸಾಮಾನ್ಯ ಜನರಲ್ಲಿಯೂ ಸೃಜನಶೀಲತೆ ಹೆಚ್ಚಾಗಿದೆ. ಡಿಜಿಟಲ್ ಮಾಧ್ಯಮದ ಸಾರ್ವತ್ರಿಕ ಶೇರ್ ಬಟನ್ನಿಂದ ಗ್ರಾಹಕರೇ ವಿತರಕರಾಗಿದ್ದಾರೆ ಎಂದರು.
ಹರ್ಷ ಆಫೀಸರ್ಸ್ ಅಕಾಡೆಮಿ ಸಂಸ್ಥಾಪಕ ಹರ್ಷ ಆರ್.ಕುರುಬರಹಳ್ಳಿ ಮಾತನಾಡಿ, ಡಿಜಿಟಲ್ ಮಾಧ್ಯಮಗಳು ಹೊಸ ಅವಕಾಶ ಸೃಷ್ಟಿಗೆ ವೇದಿಕೆಯಾಗಿವೆ. ಉದ್ಯಮ ಕಟ್ಟಲು ಮತ್ತು ಅದನ್ನು ವೇಗವಾಗಿ ಬೆಳೆಸಲು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಂಡು ಹೊಸ ಕಾಲದ ಸಮಸ್ಯೆಗೆ ಹೊಸ ಪರಿಹಾರ ಹುಡುಕಬೇಕು. ಆ ಕುರಿತು ಜನಾಭಿಪ್ರಾಯ ರೂಪಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಡಿ.ಎನ್.ಚಂದನ್ ಮಾತನಾಡಿ, ಕೈಯ್ಯಲ್ಲಿ ಮೊಬೈಲ್ ಇರುವ ಪ್ರತಿಯೊಬ್ಬರೂ ಸುದ್ದಿ, ಮಾಹಿತಿ, ಅನಿಸಿಕೆಯನ್ನು ಬರೆಯಬಹುದು, ಮಾತಾಡಬಹುದು ಮತ್ತು ಅವರೇ ಅದನ್ನು ಪ್ರಸಾರ ಸಹಾ ಮಾಡಬಹುದು. ಇದೇ ಡಿಜಿಟಲ್ ಮೀಡಿಯಾದ ಸಾಧ್ಯತೆ. ಆದರೆ, ಅವನ್ನು ವ್ಯವಸ್ಥಿತವಾಗಿ, ಯೋಜಿತವಾಗಿ ಮತ್ತು ವೃತ್ತಿಪರವಾಗಿ ಮಾಡಲು ಸಂಘಟಿತರಾಗಬೇಕು ಎಂದರು.
ಪ್ರಾಧ್ಯಾಪಕರಾದ ಡಾ.ಮಂಜುನಾಥ್ ಬುಡಸನಹಳ್ಳಿ, ಡಾ.ಲೀಲಾವತಿ, ಡಾ.ರಂಜಿತಾ, ಡಾ.ಶ್ರೀನಿವಾಸಪ್ಪ, ಡಾ.ದುರ್ಗಪ್ಪ, ನಟರಾಜ್, ಭಾರ್ಗವಿ, ಹಾಗೂ ವಿದ್ಯಾರ್ಥಿಗಳು ಇದ್ದರು.