ಸುರಪುರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ವೈಪರಿತ್ಯ ಹಾಗೂ ಮೆಗಾ ಎಲ್-ನಿನೋದಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಸಾಧ್ಯತೆ ಇರುವುದರಿಂದ ಬೆಳೆ ಹಾನಿಯಾಗುವ ಸಂಭವ ಹೆಚ್ಚಿಗಿದೆ. ಹೀಗಾಗಿ ಸುರಪುರ ಮತ್ತು ಹುಣಸಗಿ ತಾಲೂಕಿನ ರೈತರು ಮುಂಜಾಗ್ರತೆ ಕ್ರಮವಾಗಿ ಮತ್ತು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸುರಪುರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಮನಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಬೆಳೆ ಯೋಜನೆಯನ್ನು ಇಪೋ ಟೋಕಿಯೊ ಜನರಲ್ ಇನ್ಸೂರೆನ್ಸ್ ಕಂಪನಿಯು ಅನುಷ್ಠಾನಗೊಳಿಸುತ್ತಿದ್ದು, ರೈತರು ತಾವು ಬೆಳೆದ ಬೆಳೆಗಳಿಗೆ ನಿಗದಿಪಡಿಸಿರುವ ಕೊನೇ ದಿನಾಂಕದೊಳಗೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು. ಬೆಳೆ ವಿಮೆ ನೋಂದಣಿಗೆ ಎಫ್ಐಡಿ ಸಂಖ್ಯೆ, ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು.
ನೋಂದಣಿಗೆ ಕೊನೇ ದಿನ: ಉದ್ದು ಮತ್ತು ಹೆಸರು ಜು.15, ತೊಗರಿ (ನೀರಾವರಿ), ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಜು. 31, ತೊಗರಿ (ಮಳೆಯಾಶ್ರಿತ) ಮತ್ತು ಭತ್ತ (ನೀರಾವರಿ) ಆ.14, 2026.
ವಿಮೆ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಇಪೋ ಟೋಕಿಯೊ ಕಂಪನಿಯ ಪ್ರತಿನಿಧಿಗಳಾದ ಸಂತೋಷ (ಹುಣಸಗಿ ತಾಲೂಕು-9972320999 ಅಥವಾ ಮಾಲಿಂಗರಾಯ (ಸುರಪುರ ತಾಲೂಕು-7760545692) ಅವರನ್ನು ಸಂಪರ್ಕಿಸಬಹುದು. ಅಲ್ಲದೆ ಸಮೀಪದ ರೈತ ಸಂಪರ್ಕ ಕೇಂದ್ರ (ಆರ್ಎಸ್ಕೆ), ನಾಗರೀಕ ಸೇವಾ ಕೇಂದ್ರ (ಸಿಎಸ್ಸಿ) ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.