ಬೇತಮಂಗಲ: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಸುಮಾರು ಮೂರೂವರೆ ಲಕ್ಷ Protest ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದು, ಎಲ್ಲರನ್ನೂ ಕಾಯಂ ನೌಕರರನ್ನಾಗಿ ಮಾಡಬೇಕು ಎಂದು ಬಹು ಸಮಾಜ ವಿಚಾರ ವೇದಿಕೆ ಅಧ್ಯಕ್ಷ ಕೆಸಿ ರಾಜಣ್ಣ ಹೇಳೀದರು.
ಕಾಯಂ ನೇಮಕಾತಿಗೆ ಒತ್ತಾಯ ಮಾಡುವ ದೊಡ್ಡಮಟ್ಟದ ಹೋರಾಟದ ಕುರಿತು ಪಟ್ಟಣದ ಖಾಸಗಿ ಮಂಟಪದಲ್ಲಿ ಹೊರಗುತ್ತಿಗೆ ನೌಕರರಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜ.17 ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ಹೊರಗುತ್ತಿಗೆ ನೌಕರರನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ನಿರಂತರ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಬಂಗಾರಪೇಟೆ ವಸತಿ ಶಾಲೆಯ ಹೊರಗುತ್ತಿಗೆ ಮಹಿಳಾ ನೌಕರರು ತಮ್ಮ ಸಮಸ್ಯೆ ಹೇಳಿಕೊಂಡರು. ಹಾಸ್ಟೆಲ್ನಲ್ಲಿ ಅನೇಕ ಸಮಸ್ಯೆ ಎದುರಾಗಿದ್ದು, ಅದಕ್ಕೆ ವಾರ್ಡನ್ ಸೇರಿ ಮೇಲಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಎಲ್ಲವನ್ನೂ ನಮ್ಮ ಮೇಲೆಯೇ ಹಾಕುತ್ತಾರೆ. ಜತೆಗೆ ಬಹಳ ಕಡಿಮೆ ಸಂಬಳ ಪಡೆಯುವ ನಾವು ನಮ್ಮ ಕೈನಿಂದ ಖರ್ಚು ಮಾಡುವ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾತ್ರಿ ನಾವು ಮತ್ತು ವಾಚ್ಮನ್ ಇರ್ತಿವಿ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾದರೆ ಆಟೋಗೆ ದುಡ್ಡು ಕೊಟ್ಟು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಚಿಕಿತ್ಸೆಗೆ, ಔಷಧಕ್ಕೆ ಮತ್ತು ಹೆಣ್ಣು ಮಕ್ಕಳಿಗೆ ಬೇಕಾದ ಒಳ ಉಡುಪು, ಪ್ಯಾಡ್ ಸಹ ನಾವು ಕೊಡುವಂತ ಪರಿಸ್ಥಿತಿ ಬಂದಿದೆ. ಮೇಲಧಿಕಾರಿಗಳಿಗೆ ಹೇಳಿದರೆ ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುತ್ತಾರೆ. ಜಾಸ್ತಿ ಮಾತಾಡಿದರೆ ಕೆಲಸದಿಂದ ತೆಗೆದು ಹಾಕುತ್ತಾರೆ ಎಂಬ ಭಯದಿಂದ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದೇವೆ ಇದಕ್ಕೆಲ್ಲ ಏನಾದರೂ ಪರಿಹಾರ ನೀಡುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ವೆಂಕಟೇಶ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶ್ವಿನ್, ಮಹಿಳಾ ಟಕದ ಅಧ್ಯಕ್ಷೆ ಉಪಾಧ್ಯಕ್ಷೆ ಚೆಂಗಮ್ಮ, ಪ್ರಧಾನ ಕಾರ್ಯದರ್ಶಿ ಕೆಎಂವಿ ರಾಜು, ದಲಿತ ಸಂಘಟನೆಯ ಹಿರಿಯ ಮುಖಂಡ ಕರ್ಣ ಕುಮಾರ್ ಇದ್ದರು.