

ಪ್ರಮುಖ ಮುಖ್ಯಾಂಶಗಳು
ರಾಧಾಕೃಷ್ಣಾ ಯೋಜನೆ ವಿರೋಧಿಸಿ ಪ್ರತಿಭಟನೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಮಹಾರಾಷ್ಟ್ರದ ಇಂಚಲಕರಂಜಿ ನಗರಕ್ಕೆ ನೀರು ಸರಬರಾಜು ಮಾಡಲು ಮಹಾರಾಷ್ಟ್ರ ಸರ್ಕಾರ ಘೋಷಿಸಿರುವ ರಾಧಾಕೃಷ್ಣ ಯೋಜನೆ ವಿರೋಧಿಸಿ ಸೋಮವಾರ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ರೈತರು ಕಿತ್ತೂರು ಕರ್ನಾಟಕ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ನಿರೀಕ್ಷರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಹಾರಾಷ್ಟ್ರ ಸರ್ಕಾರ ಇಂಚಲಕರಂಜಿ ನಗರಕ್ಕೆ ಗಡಿಭಾಗ ದಾನವಾಡ ಬಳಿ ಜಾಕವೇಲ್ ನಿರ್ಮಿಸಿ ನೀರು ಸರಬರಾಜು ಮಾಡಲು ಮುಂದಾಗಿದೆ. ಈ ಯೋಜನೆ ಜಾರಿಯಾದರೇ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಸಂಗ್ರಹವಾಗುವ ನೀರಿನ ಮೂಲಕ್ಕೆ ಕೊರತೆಯಾಗುವ ಸಾಧ್ಯತೆಯಿದೆ. ಗಡಿ ಭಾಗ ರೈತರು ಈಗಾಗಲೇ ನೀರಾವರಿ ಹಾಗೂ ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಪಾಲಿನ ನೀರನ್ನು ಮಹಾರಾಷ್ಟ್ರಕ್ಕೆ ಹರಿಸಲು ಹೊರಟಿರುವುದು ರಾಜ್ಯದ ರೈತರಿಗೆ ಅನ್ಯಾಯವಾಗಲಿದೆ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರು ಅಕ್ರೋಶ ವ್ಯಕ್ತ ಪಡಿಸಿದರು.
ಕಿತ್ತೂರ ಕರ್ನಾಟಕ ಸೇನೆ ಮಹಾದೇವ ತಳವಾರ ಹಾಗೂ ನಾಗೇಶ ಮಾಳಿ ಮಾತನಾಡಿ ರಾಧಾಕೃಷ್ಣಾ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಗಸ್ಟ ೯ ಒಳಗಾಗಿ ನಿಲುವು ಸ್ಪಷ್ಟಪಡಿಸಬೇಕು,ಇಲ್ಲವಾದರೇ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಚಿಕ್ಕೋಡಿಯ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಕೃಷ್ಣಾ ನದಿ ನೀರಿನ ವಿಷಯದಲ್ಲಿ ಈ ಭಾಗದ ಜನಪ್ರತಿನಿಧಿಗಳು ಒಂದಾಗುವ ಮೂಲಕ ಗಡಿಭಾಗದ ರೈತರ ನೀರಾವರಿ,ಕುಡಿಯುವ ನೀರಿನ ಯೋಜನೆಗಳಿಗೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.
ದೇವೇಂದ್ರ ತಳವಾರ, ಶ್ರವಣಕುಮಾರ ಗುಡೆ, ಸುರೇಶ ಬ್ಯಾಕುಡಿ,ರೇಣುಕಾ ಕಾಡಾಪುರೆ, ಸನೋಲಿ ನದಾಫ್, ಅರುಣ ಕಮತೆ ಇತರರಿದ್ದರು.