ಚತುರ್ಭುಜನಾಗಿ ದರ್ಶನ ನೀಡಿದ ಶ್ರೀರಾಮ

ಶ್ರೀ ಗವಿರಾಯ ಸ್ಬಾಮಿ ದೇವಾಲಯದ ಹೊರ ನೋಟ.
ಶ್ರೀ ಗವಿರಾಯ ಸ್ಬಾಮಿ ದೇವಾಲಯದ ಹೊರ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಸತ್ತೇಗಾಲ ಗ್ರಾಮ ಸಮೀಪವಿರುದ ಗವಿರಾಯಸ್ವಾಮಿ
  • ಚತುರ್ಭುಜ ದೈವ

ಕೊಳ್ಳೇಗಾಲ:

ತಾಲೂಕಿನ ಸತ್ತೇಗಾಲ ಗ್ರಾಮ ಸಮೀಪವಿರುದ ಗವಿರಾಯಸ್ವಾಮಿ ಭಕ್ತರ ಆಶಯ ಈಡೇರಿಸುವ ಚತುರ್ಭುಜ ದೈವವಾಗಿ (ಸತ್ಯಾದ್ರಿ ಬೆಟ್ಟ) ಬೆಟ್ಟದಲ್ಲಿ ಶ್ರೀರಾಮನಾಗಿ ನೆಲೆಸಿದ್ದಾನೆ.

ಮನೆ, ವಿವಾಹ, ಉದ್ಯೋಗ ಸಮಸ್ಯೆಗಳಿದ್ದಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರೆ ಒಳಿತಾಗಲಿದೆ ಎಂಬುದು ಜನರ ನಂಬಿಕೆ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ.
ದೇವಾಲಯ ಹಿನ್ನೆಲೆ:

ಶ್ರೀರಾಮನನ್ನು ಗವಿರಾಯಸ್ವಾಮಿ ಎಂದು ಕರೆಯಲಾಗುತ್ತದೆ. ತ್ರೇತಾಯುಗದಲ್ಲಿ ಸೀತೆಯ ಅಪರಹಣವಾದ ಮೇಲೆ ಶ್ರೀರಾಮಚಂದ್ರ ದಂಡಕಾರಣ್ಯದ ಭಾರಧ್ವಜ ಮಹರ್ಷಿಗಳ ಆಶ್ರಮದಿಂದ ಸೀತೆಯನ್ನು ಹುಡುಕಿಕೊಂಡು ಬರುವಾಗ ಸತ್ಯಾದ್ರಿ ಬೆಟ್ಟದಲ್ಲಿ 1 ದಿನ ತಂಗಿದ್ದನು ಎಂಬ ಬಗ್ಗೆ ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ.

ಸೀತೆಯನ್ನು ಹುಡಕುತ್ತ ಬರುವಾಗ ಕಾಡಿನ ಸಸ್ಯ ರಾಶಿಗಳು, ಪ್ರಾಣಿ-ಪಕ್ಷಿಗಳು ಸೀತೆಯ ಅಪಹರಣದ ಮಾಹಿತಿಯನ್ನು ಶ್ರೀರಾಮನಿಗೆ ನೀಡಿ, ಸಹಾಯ ಮಾಡಿರುವ ಕುರಿತು ಪುರಾಣದಲ್ಲಿ ಉಲ್ಲೇಖವಿದೆ. ಕೊನೆಗೆ ರಾವಣನ ವದೆಯಾದ ಮೇಲೆ ಸೀತೆಯ ಜತೆ ಅದೇ ಮಾರ್ಗದಲ್ಲಿ ಹಿಂದಿರುಗುತ್ತಾನೆ. ಈ ವೇಳೆ ದಾರಿಯಲ್ಲಿ ಸೀತಾ ದೇವಿಗೆ ಹೇಗೆಲ್ಲ ನಿನ್ನನ್ನು ಹುಡುಕಿದೆ... ಯಾವ ಪಕ್ಷಿ-ಪ್ರಾಣಿ, ಸಸ್ಯಗಳು ನನ್ನ ಜತೆ ಮಾತನಾಡಿದವು... ನಿನ್ನ ಸುಳಿವು ನೀಡಿದವು ಎಂಬ ಬಗ್ಗೆ ತಿಳಿಸುತ್ತ ಸತ್ಯಾದ್ರಿ ಬೆಟ್ಟಕ್ಕೆ ಕರೆತರುತ್ತಾನೆ. ಈ ವೇಳೆ ಶ್ರೀರಾಮಚಂದ್ರ ಹಾಗೂ ಸೀತೆ 1 ದಿನ ಸತ್ಯಾದ್ರಿ ಬೆಟ್ಟದಲ್ಲಿ ಇದ್ದರು ಎಂಬುದು ಈಗ ಇತಿಹಾಸ.

ಲಕ್ಷ್ಮಣ ತೀರ್ಥ ಕೊಳ:

ಶ್ರೀರಾಮ ಸೀತೆಯನ್ನು ಕರೆತರುವಾಗ ಬಾಯಿರಿಕೆಯಾಗಿದ್ದು, ನೀರುಬೇಕೆಂದು ಲಕ್ಷ್ಮಣನನ್ನು ಕೇಳುತ್ತಾಳೆ. ತಾಯಿ ಆಜ್ಞೆಯಂತೆ ಲಕ್ಷ್ಮಣ ವರುಣಾಸ್ತ್ರ ಬಿಟ್ಟಾಗ ನೀರಿನ ಕೊಳವೊಂದು ಅಲ್ಲಿ ಉದ್ಭವವಾಗುತ್ತದೆ. ಇಂದಿಗೂ ಈ ಕೊಳವನ್ನು ಗವಿರಾಯಸ್ವಾಮಿ ಬೆಟ್ಟದಲ್ಲಿ ನೋಡಬಹುದಾಗಿದ್ದು, ಇದನ್ನು ಲಕ್ಷ್ಮಣ ಕೊಳವೆಂದೇ ಕರೆಯಲಾಗುತ್ತದೆ. ಅಲ್ಲದೆ ಈ ಕೊಳದಲ್ಲಿಯೆ ಶ್ರೀರಾಮಚಂದ್ರ ತನ್ನ ತಂದೆ ದಶರಥನಿಗೆ ಪಿಂಡ ಪ್ರದಾನ ಮಾಡಿದ್ದನು ಎಂಬುದನ್ನು ಪುರಾಣ ಹೇಳುತ್ತದೆ.

ರಾಕ್ಷಸನಿಗೆ ಮೋಕ್ಷ:

ಸೀತೆಯನ್ನು ಕರೆ ತರುವಾಗ ಸಹ್ಯಾದ್ರಿ ಬೆಟ್ಟದ ಗವಿಯೊಂದರಲ್ಲಿ ಶಂಬೂಕ ಎಂಬ ರಾಕ್ಷಸ ನೆಲೆಸಿದ್ದ ಎನ್ನಲಾಗಿದೆ. ಆತನೂ ಗಂಧರ್ವನಾಗಿದ್ದು, ಋಷಿ ಶಾಪದಿಂದ ರಾಕ್ಷನಾಗಿದ್ದ. ಬೆಟ್ಟದಲ್ಲಿ ಶ್ರೀರಾಮನ ಪಾದ ಸ್ಪರ್ಶವಾದ ಬಳಿಕ ಶಂಬೂಕಾಸುರನಿಗೆ ಮೋಕ್ಷ ದೊರೆತಿರುವ ಕುರಿತು ಐತಿಹ್ಯ ಇದೆ. ಈ ವೇಳೆ ಶ್ರೀರಾಮನನ್ನು ವಿಷ್ಣುವಿನ ರೂಪದಲ್ಲಿ ನೋಡಬೇಕೆಂದು ಶಂಬೂಕಾಸುರ ಪ್ರಾರ್ಥಿಸಿದಾಗ ಎರಡೂ ಕೈಯಲ್ಲಿ ಶಂಕ ಚಕ್ರ, ಇನ್ನೊಂದು ಕೈಯಲ್ಲಿ ಬಿಲ್ಲು, ಮೊತ್ತೊಂದು ಕೈ ವರನೀಡುವಂತೆ ಚತುರ್ಭುಜ ದೈವನಾಗಿ ಶ್ರೀರಾಮ ಕಾಣಿಸಿಕೊಂಡನು ಎನ್ನುವ ಐತಿಹ್ಯವಿದೆ.

ಏಕಾಂತ ಸೇವಾ ವಿಷಯ:

ಶ್ರೀರಾಮ ಮತ್ತು ಸೀತೆ ಏಕಾಂತದಲ್ಲಿರುವಾಗ ಆಂಜನೇಯನಿಗೆ ಮಾತ್ರ ಹೋಗಲು ಅಧಿಕಾರವಿತ್ತು. ಈ ವರವನ್ನು ಸೀತೆ ಆಂಜನೇಯನಿಗೆ ನೀಡಿದ್ದಳು. ಅಪಹರಣವಾಗಿ ಅಶೋಕವನದಲ್ಲಿದ್ದ ಸೀತೆಯನ್ನು ಭೇಟಿ ಮಾಡಿದ ಆಂಜನೇಯ ನಾನು ರಾಮನ ಧೂತನಾಗಿ ಬಂದಿದ್ದೇನೆ ಎಂದು ಹೇಳಿ ಮಾತೆಗೆ ಮುದ್ರಿಕೆ ತೋರಿಸುತ್ತಾನೆ. ಆ ಬಳಿಕ ಆಂಜನೇಯನನ್ನು ಮಗನಂತೆ ನೋಡುತ್ತಾಳೆ. ಏಕಾಂತದಲ್ಲೂ ಆಂಜನೇಯ ಓಡಾಡಬಹುದು ಎಂಬ ಅಧಿಕಾರ ನೀಡಿದಳು ಎಂದು ಪುರಾಣದಲ್ಲಿ ಉಲ್ಲೇಖವಿದೆ.

ವರ್ಷಕೊಮ್ಮೆ ತೇರು:

ಹೋಳಿ ಹುಣ್ಣಿಮೆಯಲ್ಲಿ ಗವಿರಾಯ ಸ್ವಾಮಿ ಬೆಟ್ಟದಲ್ಲಿ ತೇರು ನಡೆಯುತ್ತದೆ. ಅಂತೆಯೇ ಶನಿವಾರದಂದು ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಎಲ್ಲ ಸಮುದಾಯದ ಜನರು ದೇವರ ದರ್ಶನ ಪಡೆಯುತ್ತಾರೆ. ಬೆಟ್ಟದ ಮೇಲೆ ಅಡುಗೆ ಮಾಡಿ ದೇವರಿಗೆ ಸಮರ್ಪಿಸಿ ಸವಿದು ಹರಕೆ ತೀರಿಸುವುದರ ಜತೆಗೆ ದೇವರ ಸೇವೆ ಮಾಡುತ್ತಾರೆ.

ತಲುಪುವ ಮಾರ್ಗ:

ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪ ಈ ದೇವಾಲಯವಿದೆ. ಕೊಳ್ಳೇಗಾಲ ಪಟ್ಟಣದಿಂದ 13 ಕಿ.ಮೀ. ಚಾಮರಾಜನಗರ ಜಿಲ್ಲೆಯಿಂದ 49 ದೂರವಿದ್ದು, ಸ್ವಂತ ವಾಹನದಲ್ಲೂ ಇಲ್ಲಿಗೆ ಬರಬಹುದಾಗಿದೆ.

ಗವಿರಾಯಸ್ವಾಮಿ ಬೆಟ್ಟ ( ಸತ್ಯಾದ್ರಿ ಬೆಟ್ಟ) ಶ್ರೀರಾಮ ಚತುರ್ಭುಜ ದೈವನಾಗಿ ನೆಲೆಗೊಂಡಿದ್ದಾನೆ. ಶಂಬೂಕಾಸುರನಿಗೆ ಮೋಕ್ಷ ದೊರೆತ ಸ್ಥಳ ಇದಾಗಿದೆ. ಈ ಕ್ಷೇತ್ರದಲ್ಲಿ ಮನೆ, ಮದುವೆ, ಉದ್ಯೋಗ ಸಮಸ್ಯೆಗಳನ್ನು ಪರಿಹರಿಸಲು ಪ್ರಾರ್ಥಿಸಿದರೆ ಒಳಿತಗಾಗಲಿದೆ. ವಿಶೇಷವಾಗಿ ಸೀತಾ ಮಾತೆ ಬಳಿ ಬಂದು ಪ್ರಾರ್ಥನೆ ಮಾಡಿದರೆ ವಿವಾಹ ಭಾಗ್ಯ ದೊರೆಯಲಿದೆ ಎಂಬ ನಂಬಿಕೆ ಇದೆ.
ಅತ್ರೇಯ ವೇಣುಗೋಪಾಲ ಶರ್ಮ, ತಲಕಾಡು
ಗವಿರಾಯಸ್ವಾಮಿ ದೇವಾಲಯದಲ್ಲಿ ಪಾಲ್ಗುಣ ಮಾಸದ ಪೌರ್ಣಮಿಯಂದು ರಥೋತ್ಸವ ನೆರವೇರಲಿದೆ. ಶ್ರಾವಣ ಮಾಸದಲ್ಲಿ ಶನಿವಾರದಿಂದ ವಿವಿಧ ಗ್ರಾಮಗಳ ಭಕ್ತರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಇಷ್ಟಾರ್ಥ ಸಿದ್ಧಿಸುವ ದೈವನಾಗಿ ಶ್ರೀರಾಮ ನೆಲೆಸಿದ್ದಾನೆ.
ಮಾಧವನ್ ಅರ್ಚಕರು, ಗವಿರಾಯ ಸ್ವಾಮಿ ದೇವಾಲಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net