ಬಲರಾಮ ಅಮರ ರಹೆ ! ಸಚಿವ ಎಂ.ಬಿ. ಪಾಟೀಲರಿಂದ ಮಹತ್ವದ ಸಂಕಲ್ಪ, ಅಂಗಾಂಗ ದಾನದ ಮೂಲಕ ಆಂದೋಲನಕ್ಕೆ ಸಜ್ಜು

ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯ ಸಭಾಂಗಣದಲ್ಲಿ ದಿ.ಬಲರಾಮ ಕೃಷ್ಣ ಬಾಗಲಕೋಟೆ ಕುಟುಂಬಸ್ಥರಿಗೆ ಸಚಿವ ಎಂ.ಬಿ. ಪಾಟೀಲ ಗೌರವಿಸಿದರು. ಸಮ ಕುಲಪತಿ ಡಾ.ಅರುಣ ಇನಾಮದಾರ, ಡಾ.ಜಯರಾಜ್ ಇತರರಿದ್ದಾರೆ.
ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯ ಸಭಾಂಗಣದಲ್ಲಿ ದಿ.ಬಲರಾಮ ಕೃಷ್ಣ ಬಾಗಲಕೋಟೆ ಕುಟುಂಬಸ್ಥರಿಗೆ ಸಚಿವ ಎಂ.ಬಿ. ಪಾಟೀಲ ಗೌರವಿಸಿದರು. ಸಮ ಕುಲಪತಿ ಡಾ.ಅರುಣ ಇನಾಮದಾರ, ಡಾ.ಜಯರಾಜ್ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಭೀಕರ ಅಪಘಾತದಲ್ಲಿ ಮಿದುಳು ನಿಷ್ಕ್ರೀಯ
  • ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ
  • ಬಿಎಲ್‌ಡಿಇ ವೈದ್ಯರ ಅನುಪಮ ಸಾಧನೆ
  • ದೇಶಾದ್ಯಂತ ಅಭಿಯಾನ ರೂಪಿಸಲು ಸಜ್ಜು
ವಿಜಯಪುರ: ‘ಸಾವಿನಲ್ಲೂ ಸಾರ್ಥಕತೆ ಮೆರೆದ ತರುಣ, ನೋವಿನಲ್ಲೂ ಅಂಗಾಂಗ ಹಸ್ತಾಂತರಿಸಿದ ಕುಟುಂಬ, ಭಯ-ಆತಂಕಗಳ ಮಧ್ಯೆಯೂ ಕ್ಲಿಷ್ಟಕರ ಸನ್ನಿವೇಶವನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದ ವೈದ್ಯರ ತಂಡ, ತ್ಯಾಗಕ್ಕೆ ಪ್ರತಿಫಲವೆಂಬಂತೆ ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ಭರವಸೆ ನೀಡಿದ ಶಿಕ್ಷಣ ಸಂಸ್ಥೆ, ಸ್ವಯಂ ಅಂಗಾಂಗ ದಾನದ ಘೋಷಣೆ ಮೂಲಕ ದೇಶಾದ್ಯಂತ ಆಂದೋಲನ ನಡೆಸಲು ಮುಂದಾದ ಮುತ್ಸದ್ದಿ ಮಂತ್ರಿ...!
ಅಬ್ಬಬ್ಬಬ್ಬಾ....! ಏನು ಕಾಳಜಿ ? ಅದೇನು ಮಾನವೀಯತೆ? ಅದೆಂಥಾ ತ್ಯಾಗ...? ಒಬ್ಬೊಬ್ಬರ ಪಾತ್ರವೂ ಅನನ್ಯ, ಅಮೋಘ, ಅನುಪಮ !
ಭೀಕರ ರಸ್ತೆ ಅಪಘಾತವೊಂದರಲ್ಲಿ ಮಿದುಳು ನಿಷ್ಕ್ರೀಯಗೊಂಡು ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಾದ ತರುಣನೋರ್ವನ ಅಂಗಾಂಗ ದಾನದ ಪ್ರಕರಣವೊಂದು ಮೈನವಿರೇಳಿಸುತ್ತಿದ್ದು ಇಡೀ ದೇಶಕ್ಕೆ ಮಾದರಿಯಾಗಿದೆ.
ಕೇವಲ 30ರ ಹರೆಯದ ಯುವಕ ಬಲರಾಮ ಕೃಷ್ಣ ಬಾಗಲಕೋಟೆ ಎಂಬಾತ ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರೆ, ಕುಟುಂಬಸ್ಥರು ಆತನ ಅಂಗಾಂಗಗಳನ್ನು ಹಸ್ತಾಂತರಿಸುವ ಮೂಲಕ ಮಾದರಿಯಾಗಿದ್ದಾರೆ. ಅಷ್ಟೇ ನಾಜೂಕಾಗಿ ಪ್ರಕರಣ ನಿಭಾಯಿಸಿದ ವೈದ್ಯರ ತಂಡ ಸಕಾಲಕ್ಕೆ ಅಂಗಾಂಗಗಳನ್ನು ಹಸ್ತಾಂತರಿಸಿ ಸಾಗಿಸುವ ಮೂಲಕ ಇನ್ನಷ್ಟು ಜೀವಗಳನ್ನು ಉಳಿಸಿ ನಾರಾಯಣ ಎನಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಠಿಸಿದ್ದ ಈ ಘಟನೆಯ ವಿಡಿಯೋಗಳನ್ನು ಗಮನಿಸಿದ ಸಚಿವ ಎಂ.ಬಿ. ಪಾಟೀಲರು ಸಹ ಖುದ್ದಾಗಿ ಬಿಎಲ್‌ಡಿಇಗೆ ಭೇಟಿ ನೀಡಿ ಕುಟುಂಬಸ್ಥರನ್ನು, ವೈದ್ಯರನ್ನು ಗೌರವಿಸಿದ್ದಾರಲ್ಲದೇ ಸ್ವತಃ ಅಂಗಾಂಗ ದಾನದ ಘೋಷಣೆ ಮೂಲಕ ದೇಶಾದ್ಯಂತ ಅಭಿಯಾನ ಆರಂಭಿಸುವ ಸಂಕಲ್ಪ ತೊಟ್ಟಿದ್ದಾರೆ.
ಸೋಮವಾರ ಬಿಎಲ್‌ಡಿಇಯಲ್ಲಿ ಬಲರಾಮನ ಕುಟುಂಬಸ್ಥರನ್ನು ಗೌರವಿಸುವಾಗ ಕಣ್ಣಾಲೆಯಲ್ಲಿ ನೀರು ತುಂಬಿಕೊಂಡಿದ್ದ ಸಚಿವ ಎಂ.ಬಿ. ಪಾಟೀಲರು ವೈದ್ಯರ ಸಾಧನೆ ಕೊಂಡಾಡುವಾಗ ಅಷ್ಟೇ ಹೆಮ್ಮೆ ಮತ್ತು ಅಭಿಮಾನ ಹೊಂದಿದ್ದರು. ಮನುಷ್ಯ ಸಾವಿನ ನಂತರವೂ ಜೀವಂತವಾಗಿರಬೇಕಾದರೆ ಅಂಗಾಂಗ ದಾನ ಮಾಡಬೇಕೆಂದರಲ್ಲದೇ ಇದೊಂದು ಆಂದೋಲನದ ಸ್ವರೂಪ ಪಡೆದುಕೊಳ್ಳಬೇಕೆಂದರು. ಅದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಈಗಾಗಲೇ ಅಂಗಾಂಗ ದಾನದಲ್ಲಿ ಆಸ್ಟ್ರೀಯಾ, ರಷ್ಯಾ, ಸ್ಪೇನ್, ಬೆಲ್ಜಿಯಂ, ಸಿಂಗಾಪುರ, ಫ್ರಾನ್ಸ್, ಫಿನ್‌ಲ್ಯಾಂಡ್, ಪೋರ್ಚುಗಲ್, ಸ್ವೀಡನ್ ಹೀಗೆ ಅನೇಕ ರಾಷ್ಟ್ರಗಳು ಅಂಗಾಂಗ ದಾನದಲ್ಲಿ ಶೇ.100ರಷ್ಟು ಸಾಧನೆ ಮೆರೆದಿವೆ. ಹೀಗಾಗಿ ಭಾತರದಲ್ಲಿಯೂ ಅಂಥದ್ದೊಂದು ಪ್ರಯತ್ನ ನಡೆಯಬೇಕು. ಅದಕ್ಕಾಗಿ ಜಿಲ್ಲೆಯಿಂದ ಅಭಿಯಾನ ಆರಂಭಿಸಲಾಗುತ್ತಿದೆ. ಪ್ರಥಮವಾಗಿ ನಾನೇ ಅಂಗಾಂಗ ದಾನ ಮಾಡುವೆ ಎಂದು ಸಚಿವರು ಹೆಮ್ಮೆಯಿಂದ ಘೋಷಿಸಿದರು.

ಬಲರಾಮ ದೇಶಪ್ರೇಮಿ ಎಂದ ಕುಟುಂಬಸ್ಥರು

‘ಮದುವೆ ಯಾರು ಬೇಕಾದರೂ ಆಗಬಹುದು, ಮಕ್ಕಳು ಯಾರು ಬೇಕಾದರೂ ಹೆರಬಹುದು, ದೇಶ ಸೇವೆಗೆ ನನ್ನಂಥವರೇ ಬೇಕು, ನಾನು ದೇಶಕ್ಕಾಗಿ ಏನಾನ್ನಾದರೂ ಮಾಡಬೇಕು’ ಎನ್ನುತ್ತಿದ್ದ ಬಲರಾಮ ‘ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ, ಪೂಜ್ಯ ಸಿದ್ಧೇಶ್ವರ ಶ್ರೀಗಳನ್ನು ಮಾದರಿಯಾಗಿಟ್ಟುಕೊಂಡಿದ್ದ. ಯಾವಾಗಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ. ಸಾಯುವ ಸಂದರ್ಭದಲ್ಲಿಯೂ ಅಂಗಾಂಗ ದಾನದ ಮೂಲಕ ಈ ಸಮಾಜಕ್ಕೆ ಸಮರ್ಪಿಸಿಕೊಂಡಿದ್ದಾನೆ’ ಎಂದು ಕುಟುಂಬಸ್ಥರು ಭಾವುಕರಾಗಿ ನುಡಿದರು.
‘ಕೋಟಿ ಕೊಟ್ಟಾದರೂ ಸರಿ ಕೋಟಿಗೊಬ್ಬನಾಗಿರು ಬಲರಾಮನನ್ನು ಉಳಿಸಿಕೊಳ್ಳುತ್ತೇವೆ, ಹೇಗಾದರೂ ಮಾಡಿ ಬದುಕಿಸಿಕೊಡಿ’ ಎಂದು ವೈದ್ಯರಲ್ಲಿ ಅಂಗಲಾಚಿದ್ದೆವು. ‘ಕಳೆದ ತಿಂಗಳಷ್ಟೇ ಆತನ ಜನ್ಮದಿನ ಆಚರಿಸುತ್ತಾ ನೂರಾರು ವರ್ಷಗಳ ಕಾಲ ಬಾಳು..... ಎಂದು ಶುಭ ಹಾರೈಸಿದ್ದೇವು, ಆದರೆ ಈಗ ಆತನೇ ಇಲ್ಲ, ಹೋಗುವಾಗಲೂ ಇನ್ನೊಬ್ಬರ ಜೀವಗಳಿಗೆ ಆಸರೆಯಾಗಿ ನೂರು ಕಾಲ ಬಾಳುತ್ತಿದ್ದಾನೆ’ ಎಂದು ಕುಟುಂಬ ಸದಸ್ಯರಾದ ಶೃತಿ ಹಳ್ಳದಮನಿ ಹಾಗೂ ರೂಪಾ ಕಣ್ಣೀರಿಡುತ್ತಲೇ ದಿ.ಬಲರಾಮ ಅವರ ಭಾವಚಿತ್ರ ಪ್ರದರ್ಶಿಸಿದಾಗ ನೆರೆದವರ ಕಣ್ಣಾಲೆಯಲ್ಲಿ ನೀರು ಜಿನುಗುತ್ತಿತ್ತು

ಬಿಎಲ್‌ಡಿಇ ವೈದ್ಯರ ಅನುಪಮ ಸಾಧನೆ

ಬಲರಾಮನ ಪ್ರಕರಣದಲ್ಲಿ ಬಿಎಲ್‌ಡಿಇ ಸಂಸ್ಥೆಯ ತಜ್ಞ ವೈದ್ಯರ ಪಾತ್ರ ಅನನ್ಯ. ಬಲರಾಮನ ಎರಡು ಕಿಡ್ನಿ ಹಾಗೂ ಎರಡು ಕಾರ್ನಿಯಾಗಳನ್ನು ದಾನವಾಗಿ ನೀಡುವ ಮೂಲಕ ಇಬ್ಬರು ರೋಗಿಗಳಿಗೆ ಜೀವದಾನ ಮಾಡಿದ್ದು, ಇಬ್ಬರು ನೇತ್ರ ಹೀನರ ಬಾಳಿಗೆ ಬೆಳಕಾಗಿದ್ದಾರೆ.
ಈ ಕುರಿತು ವಿವರ ನೀಡಿರುವ ಸಮ ಕುಲಪತಿ ಡಾ.ಅರುಣ ಇನಾಮದಾರ ಅವರು, ಮಿದುಳು ನಿಷ್ಕ್ರೀಯಗೊಂಡ ವ್ಯಕ್ತಿಯಿಂದ ಕಿಡ್ನಿಯನ್ನು ಹೊರತೆಗೆಯುವುದು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಇದೇ ಮೊದಲು ಎನ್ನಬಹುದು. ಬಿಎಲ್‌ಡಿಇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಾಧನೆ ಇದು. ಬಲರಾಮನ ಪ್ರಕರಣ ಸೇರಿದಂತೆ 10 ರೋಗಿಗಳಿಗೆ ಕಿಡ್ನಿ ಕಸಿ ಮಾಡಲಾಗಿದೆ. ಅತ್ಯಂತ ತ್ವರಿತವಾಗಿ ಬಲರಾಮನ ಕಿಡ್ನಿ ತೆಗೆದು ಬೇರೆಯವರಿಗೆ ನೀಡಲಾಗಿದೆ ಎಂದರಲ್ಲದೇ ಈ ಪ್ರಕರಣದಲ್ಲಿ ಸೇವೆ ಸಲ್ಲಿಸಿರುವ ವೈದ್ಯರು-ಸಿಬ್ಬಂದಿ ಸಾಧನೆ ಕೊಂಡಾಡಿದರು. ಬಿಎಲ್‌ಡಿಇ ವಿವಿ ಕುಲಪತಿ ಡಾ.ಜಯರಾಜ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net