ಸಮಾಜಕ್ಕೆ ಮಾದರಿಯಾಗಿ ಜೀವಿಸಿ

Live as a role model for society.
Live as a role model for society.
Published on
ಬರಗೂರು: ಒಂದು ಹಣತೆಯಿಂದ ಸಾವಿರಾರು ದೀಪಗಳು ಬೆಳಗುವ ಹಾಗೆ ಸಾಧನೆ ಮಾಡಿ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯು ಸಮಾಜದ ಇತರರನ್ನು ಬೆಳೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಬೆಂಗಳೂರಿನ ಸಿಸಿಬಿ ಉಪಪೊಲೀಸ್​ ಆಯುಕ್ತ ಶ್ರೀಹರಿಬಾಬು ಬರಗೂರು ಹೇಳಿದರು.
ಶಿರಾ ತಾಲೂಕಿನ ಬರಗೂರಲ್ಲಿ ಸಮಾನ ಮನಸ್ಕರ ಬಳಗದಿಂದ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು. ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ. ಪಾಲಕರು ವಿದ್ಯಾರ್ಥಿಗಳ ಜೀವನ ರೂಪಿಸಲು ಶ್ರಮಿಸುತ್ತಾರೆ. ಉತ್ತಮ ವ್ಯಾಸಂಗದ ಜತೆ ಶಿಸ್ತು ಶಿಕ್ಷಣ ಪಡೆಯುವುದು ಅಗತ್ಯವಾಗಿದೆ. ಆಧುನಿಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದರು.
ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಹುಟ್ಟೂರಲ್ಲಿ ಶ್ರೀಹರಿಬಾಬು ಉತ್ತಮ ಕೆಲಸ ಮಾಡುತ್ತಿದ್ದು, ಕಾರ್ಯಕ್ರಮದಲ್ಲಿ ದೊರೆಯುವ ಹಣ, ಲ್ಯಾಪ್​ಟಾಪ್​ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗಿದೆ ಎಂದರು.
ದ್ವೀತಿಯ ಪಿಯುಸಿಯ 13 ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ಹಾಗೂ 10ನೇ ತರಗತಿಯ 22 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಶ್ರೀಹರಿಬಾಬು ಅವರನ್ನು ಶ್ರೀ ಕನಕ ಯುವಕರ ಬಳಗದಿಂದ ಸನ್ಮಾನಿಸಲಾಯಿತು.
ಶಿರಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಪಾಂಡುರಂಗಯ್ಯ, ಕೆ.ನರಸಪ್ಪ, ನಗರಸಭೆ ಸದಸ್ಯ ಎಸ್​.ಎಲ್​.ರಂಗನಾಥ್​, ಸರ್ಕಾರಿ ನೌಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ್​, ಸಾಹಿತಿ ಗಿರೀಶ್​ ರಾಮಣ್ಣ, ಮುಖಂಡ ಬೊಪ್ಪಣ್ಣ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net