ಪಂಪನ ಹೆಸರಿನಲ್ಲಿ ಪ್ರಾಧಿಕಾರ ರಚಿಸುವಂತೆ ಸರ್ಕಾರಕ್ಕೆ ಸಾಹಿತಿ ಬರಗೂರು ಮನವಿ

ಪಂಪ ಪ್ರಾಧಿಕಾರಕ್ಕೆ ಬೇಡಿಕೆ
ಪಂಪ ಪ್ರಾಧಿಕಾರಕ್ಕೆ ಬೇಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • * ‘ಮನುಷ್ಯ ಜಾತಿ ತಾನೋಂದೆ ವಲಂ’ ಪಂಪವಾಣಿ
  • * ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಕವಿ
ಬೆಂಗಳೂರು: ಆದಿಕವಿ ಪಂಪನ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸಿ, ಅನುದಾನ ಒದಗಿಸಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಿ ಅವರಿಗೆ ಪತ್ರ ಬರೆದಿದ್ದಾರೆ. ಪಂಪನ ಹೆಸರಿನಲ್ಲಿ ಸಾಹಿತಿಳಿಗೆ ಒಂದು ಪ್ರಶಸ್ತಿ ನೀಡುವುದು ಹೊರತುಪಡಿಸಿ, ಬೇರೇನೂ ಕೆಲಸಗಳು ಆಗುತ್ತಿಲ್ಲ. ಮೊದಲ ಬಾರಿಗೆ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಕನ್ನಡದ ಕವಿ ಎಂಬುದು ದಾಖಲೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
‘ಮನುಷ್ಯ ಜಾತಿ ತಾನೋಂದೆ ವಲಂ’ ಎಂಬ ಪಂಪವಾಣಿ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿ ಕರ್ಣನ ಪಾತ್ರವನ್ನು ಕುಲಪದ್ಧತಿಯ ಪ್ರತಿರೋಧದ ರೂಪಕವಾಗಿ ಬಳಸಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊದಲ ಮನ್ನಣೆ ಮಹಾಕವಿಗೆ ಸಲ್ಲಬೇಕು ಎಂದು ತಿಳಿಸಿದ್ದಾರೆ.
ಪಂಪನ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸಿ, ಜಾತ್ಯತೀತ, ದ್ವೇಷಾತೀತ ಹಾಗೂ ಸೃಜನಶೀಲ ಸ್ವಾತಂತ್ರ್ಯದ ವಿಷಯಗಳನ್ನೂ ಒಳಗೊಂಡಂತೆ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ಅವರ ಸ್ಮಾರಕವನ್ನೂ ನಿರ್ಮಿಸಬಹುದು. ಅಣ್ಣೆಗೇರಿಯಲ್ಲಿರುವ ಪಂಪ ಭವನವನ್ನು ಉನ್ನತೀಕರಿಸಬಹುದು ಎಂದು ಬರಗೂರು ಅವರು ಸಲಹೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net