ಸಿಂದಗಿ ನಗರದ ಎಚ್.ಜಿ. ಕಾಲೇಜ್ ಆವರಣದಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಅಶೋಕ ಮನಗೂಳಿ ಸಸಿಗೆ ನೀರುಣಿಸಿ ಉದ್ಘಾಟಿಸಿದರು. ಸರ್ವಾಧ್ಯಕ್ಷ ಹ.ಮ.ಪೂಜಾರ, ಹಾಸಿಂಪೀರ ವಾಲಿಕಾರ, ಮಾಧವ ಗುಡಿ, ಶಿಲ್ಪಾ ಭಸ್ಮೆ, ಅಭಿಷೇಕ ಚಕ್ರವರ್ತಿ, ಅಶೋಕ ಕೋಳಾರಿ, ಸಂತೋಷ ಸಾಲಿ, ಡಾ.ಭುವನೇಶ್ವರಿ ಮೇಲಿನಮಠ, ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ಗಾಯಕವಾಡ ಮತ್ತಿತರರಿದ್ದರು.
ಸಿಂದಗಿ: ಕನ್ನಡ ನಾಡು, ನುಡಿ, ಭಾಷೆ ಬಗ್ಗೆ ಸ್ವಾಭಿಮಾನ ಹೆಚ್ಚಿಸುವ ಕನ್ನಡ ಸಾಹಿತ್ಯ ಸಮ್ಮೇಳನಗಳು ಯುವ ಸಾಹಿತಿಗಳಿಗೆ ಪ್ರೇರಣೆಯಾಗಿವೆ ಎಂದು ಶಾಸಕ ಎ.ಎಂ.ಮನಗೂಳಿ ಹೇಳಿದರು.
ನಗರದ ಎಚ್.ಜಿ. ಕಾಲೇಜ್ ಆವರಣದ ದಿ. ಎಂ.ಸಿ. ಮನಗೂಳಿ ವೇದಿಕೆಯಲ್ಲಿ ಮಂಗಳವಾರ ಜರುಗಿದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ದಶಕದ ಹಿಂದೆ ನಡೆದ ಸಮ್ಮೇಳನದ ಅದ್ದೂರಿಗೆ ಜಿಲ್ಲೆ, ತಾಲೂಕು ಪದಾಧಿಕಾರಿಗಳು ಸೇರಿ ಕನ್ನಡದ ಅಭಿಮಾನದೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಕನ್ನಡದ ಕೆಲಸಗಳಿಗಾಗಿ ಸದಾ ಮುಂದಾಗುವ ಯುವಕರು, ಕನ್ನಡ ಭಾಷಾ ಬೆರಗನ್ನು ಅರಿತು, ಸಮ್ಮೇಳನದಲ್ಲಿನ ಮಹಿಳಾ ಚಿಂತನ, ವಚನ ಸಾಹಿತ್ಯ ಸೇರಿ ಎರಡು ದಿನಗಳ ಕಾಲ ನಡೆಯುವ ಎಂಟು ಗೋಷ್ಠಿಗಳಲ್ಲಿ ಪಾಲ್ಗೊಂಡು ಕನ್ನಡಾಭಿಮಾನ ಮೆರೆಯಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಇದುವರೆಗೆ 16 ಸಮ್ಮೇಳನಗಳನ್ನು ನಡೆಸಲಾಗಿದೆ. ಸಿಂದಗಿಯಲ್ಲಿ 14 ವರ್ಷಗಳ ನಂತರದಲ್ಲಿ ಜಿಲ್ಲಾ ಸಮ್ಮೇಳನ ನಡೆಸುವ ಚಿಂತನೆಗೆ ಶಾಸಕ ಮನಗೂಳಿ ಅವರು ಪರಿಷತ್ತಿನ ಹಿಂದಿನ ಶಕ್ತಿಯಾಗಿ ನಿಂತಿದ್ದಾರೆ.
ಹ.ಮ. ಪೂಜಾರ ಅವರನ್ನು ಸರ್ವಾಧ್ಯಕ್ಷರನ್ನಾಗಿಸುವ ಸಭೆಯಲ್ಲಿ 48 ಜನರು ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದರು. ವಾರದ ಅವಧಿಯಲ್ಲಿಯೇ ಸರ್ವಾಧ್ಯಕ್ಷರ ಆಯ್ಕೆ, ಸಮ್ಮೇಳನದ ಚಟುವಟಿಕೆಗಳ ಆರಂಭಗೊಂಡಿದ್ದವು. ಪರಿಷತ್ತಿನ ಎಲ್ಲ ಕಾರ್ಯಗಳಿಗೆ ತಾಲೂಕು ಆಡಳಿತ, ಜನಪ್ರತಿನಿಧಿಗಳ ಸಹಕಾರ ದೊಡ್ಡ ಕೊಡುಗೆಯಾಗಿದ್ದ ಕಾರಣ ಸಮ್ಮೇಳನ ಯಶಸ್ವಿಯಾಗಿದೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ವೈ.ಸಿ. ಮಯೂರ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಕನ್ನಡ ಜಾತ್ರೆ ವ್ಯಾಖ್ಯಾನವಿದೆ. ನಗರದ ಮಕ್ಕಳ ಸಾಹಿತಿ ಹಿರಿಯ ಶಿಕ್ಷಕ ಹ.ಮ. ಪೂಜಾರ ಅವರನ್ನು ಸರ್ವಾಧ್ಯಕ್ಷರನ್ನಾಗಿಸಿರುವುದು ನಮ್ಮ ಪಾಲಿಗೆ ಒಂದು ಪುಣ್ಯದ ಕಾರ್ಯ. ತಾಲೂಕಿನ ಹತ್ತಾರು ಹಳ್ಳಿಗಳ ರೈತರು, ಶಿಕ್ಷಣ ಸಂಸ್ಥೆಗಳು ಸೇರಿ ಅನೇಕರ ಸಹಕಾರದಿಂದ ಈ ಸಮ್ಮೇಳನದ ಹಿರಿಮೆ ಹೆಚ್ಚಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಆಲಮೇಲದ ಧರ್ಮಾಧಿಕಾರಿ ಡಾ. ಸಂದೀಪ ಪಾಟೀಲ, ಬುರಾಣಪುರದ ಯೋಗೇಶ್ವರಿ ಮಾತಾಜಿ, ಸ್ಥಳೀಯ ಗುರುದೇವಾಶ್ರಮದ ಶಾಂತಂಗಂಗಾಧರ ಮಹಾಸ್ವಾಮಿಗಳು ಮಾತನಾಡಿ, ಜ್ಞಾನದ ಸಂದೇಶ ಹಂಚುವ ಸಮ್ಮೇಳನಗಳು, ಕನ್ನಡ ಭಾಷೆಯ ಮಾಧುರ್ಯತೆಯನ್ನು ಹೆಚ್ಚಿಸಿವೆ. ಕನ್ನಡ ಭಾಷೆಯನ್ನು ಬಲ್ಲವರಿಗೆ ಅದರ ಪರಿಮಳ ಆಸ್ವಾಧಿಸಲು ಸಾಧ್ಯ. ಕನ್ನಡದ ಅನ್ನ ತಿಂದವರ ಕಣಕಣದಲ್ಲೂ ಕನ್ನಡ ಓಯಸಿಸ್ಸಿನಂತೆ ಪುಟಿದೇಳುತ್ತದೆ ಎಂದರು.
ಶರಣ ಚಿಂತಕ, ಶಿಕ್ಷಕ, ಸಾಹಿತಿ ಸೇರಿ ಇತರ ಕ್ಷೇತ್ರಗಳ 28 ಜನರಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸರ್ವಾಧ್ಯಕ್ಷ ಹ.ಮ. ಪೂಜಾರ, ಹಾಸಿಂಪೀರ ವಾಲಿಕಾರ, ಮಾಧವ ಗುಡಿ, ಶಿಲ್ಪಾ ಭಸ್ಮೆ, ಅಭಿಷೇಕ ಚಕ್ರವರ್ತಿ, ಅಶೋಕ ಕೋಳಾರಿ, ಸಂತೋಷ ಸಾಲಿ, ಡಾ. ಭುವನೇಶ್ವರಿ ಮೇಲಿನಮಠ, ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ಗಾಯಕವಾಡ ಮತ್ತಿತರರಿದ್ದರು.