ಗುಂಡ್ಲುಪೇಟೆ: ಮದ್ಯಸೇವನೆಯಂತಹ ದುಶ್ಚಟ ಜಾತಿ, ಮತ, ಧರ್ಮ, ಲಿಂಗತಾರತಮ್ಯವಿಲ್ಲದೆ ವ್ಯಸನಿಗಳನ್ನು ನಾಶಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಪ್ರಾದೇಶಿಕ ಯೋಜನಾಧಿಕಾರಿ ಮುಖೇಶ್ ವಿಷಾದಿಸಿದರು.
ಪಟ್ಟಣದ ಲ್ಯಾಂಪ್ಸ್ ಸೊಸೈಟಿ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ 2082ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಾನಾ ಕಾರಣಗಳಿಂದ ಕುಡಿತದ ದುಶ್ಚಟಕ್ಕೆ ಬಲಿಯಾದವರು ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಬೇಡದ ವ್ಯಕ್ತಿಗಳಾಗಿದ್ದಾರೆ. ಇಂಥವರನ್ನು ದುಶ್ಚಟದಿಂದ ಪಾರುಮಾಡುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ರಾಜ್ಯಾದ್ಯಂತ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಿದೆ. 8 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಶಿಬಿರಾರ್ಥಿಗಳ ಮಾನಸಿಕ ಶಕ್ತಿಯನ್ನು ಉತ್ತೇಜಿಸಿ ಮನಪರಿವರ್ತನೆ ಮಾಡಲಾಗುವುದು ಎಂದು ಹೇಳಿದರು.
ಪಟ್ಟಣ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್ ಮಾತನಾಡಿ, ಮದ್ಯವ್ಯಸನಕ್ಕೆ ಬಲಿಯಾದ ವ್ಯಕ್ತಿಗಳ ಕುಟುಂಬಗಳು ಬೀದಿ ಪಾಲಾಗುತ್ತಿವೆ. ವ್ಯಸನಿಯು ಎಷ್ಟೇ ಒಳ್ಳೆಯವನಾದರೂ ಕೌಟುಂಬಿಕ ಹಾಗೂ ಸಾಮಾಜಿಕವಾಗಿ ಕೀಳಾಗಿ ಕಾಣಲಾಗುತ್ತದೆ. ಆದ್ದರಿಂದ ಮದ್ಯ ವ್ಯಸನಕ್ಕೆ ಬಲಿಯಾದವರು ಇಂತಹ ಶಿಬಿರಗಳ ಸದುಪಯೋಗ ಪಡೆದು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್, ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್, ಬಿ.ಕುಮಾರಸ್ವಾಮಿ, ಶಿಬಿರದ ಆಯೋಜಕ ಶಿವಕುಮಾರ್, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಮುದ್ದಯ್ಯ ಇತರರು ಇದ್ದರು.