ಉತ್ತಮ ಆರೋಗ್ಯಕ್ಕಾಗಿ ಪೂರೈಸೋಣ ಈ ಎಂಟು ಪ್ರತಿಜ್ಞೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
1. ದೈಹಿಕ ವ್ಯಾಯಾಮ: 24 ಗಂಟೆಗಳಲ್ಲಿ ಕನಿಷ್ಠ 30 ರಿಂದ 60 ನಿಮಿಷಗಳನ್ನು ನಾವು ದೈಹಿಕ ಶ್ರಮಕ್ಕೆ ಅಂದರೆ ವ್ಯಾಯಾಮಕ್ಕೆ ಕೊಡಲೇಬೇಕು. ಅದರಲ್ಲಿಯೂ ಯೋಗ ಶಾಸ್ತ್ರದಲ್ಲಿ ಹೇಳಿದ ಆಸನಗಳನ್ನು ಅಭ್ಯಾಸ ಮಾಡಿದರೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕ ಆರೋಗ್ಯ ಕೂಡ ವೃದ್ಧಿಯಾಗುತ್ತದೆ.
2. ಸೂರ್ಯ ಸ್ನಾನ: ಆರೋಗ್ಯದ ಕೋಟಿ ಕಿರಣಗಳನ್ನು ಹೊತ್ತು ಭಾಸ್ಕರನು ಪ್ರತಿದಿನವೂ ಬರುತ್ತಾನೆ. ನಾವು ಅದನ್ನು ಸ್ವೀಕರಿಸದೇ ಮೂರ್ಖರಾಗುತ್ತಿದ್ದೇವೆ. ವಿಟಮಿನ್ ಡಿ ಗಾಗಿ ಮಾತ್ರವಲ್ಲ; ನಮ್ಮ ದೈಹಿಕ, ಮಾನಸಿಕ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಚೆನ್ನಾಗಿರಲು ಸೂರ್ಯನ ಬೆಳಕಿಗೆ ಮೈಯ್ಯೊಡ್ಡುವುದು ಅತ್ಯಂತ ಅನಿವಾರ್ಯ. ಹಾಗಾಗಿ ಕನಿಷ್ಠ 10 ರಿಂದ 15 ನಿಮಿಷವಾದರೂ ಸೂರ್ಯಸ್ನಾನವನ್ನು ನಿತ್ಯವೂ ಮಾಡೋಣ.
3. ಹಣ್ಣುಗಳ ಸೇವನೆ: ಎಷ್ಟೋ ವಿಟಮಿನ್​ಗಳು, ಖನಿಜಗಳು ನಮಗೆ ಹಣ್ಣುಗಳ ಸೇವನೆಯಿಂದ ಸಿಗುತ್ತವೆ. ಬೊಜ್ಜು, ಡಯಾಬಿಟೀಸ್, ಖಿನ್ನತೆ, ಮೂಳೆಗಳ ಸಮಸ್ಯೆ, ಚರ್ಮದ ತೊಂದರೆ ಮುಂತಾದ ಎಷ್ಟೋ ರೀತಿಯ ಸಮಸ್ಯೆಗಳಲ್ಲಿ ಹಣ್ಣು ಒಳ್ಳೆಯ ಔಷಧವಾಗಿ ಕೂಡ ಕೆಲಸ ಮಾಡುತ್ತದೆ. ಹಾಗಾಗಿ ಪ್ರತಿನಿತ್ಯ ನಮ್ಮ ಊಟದ ಒಂದು ಪಾಲು ಹಣ್ಣುಗಳಿಂದಲೇ ತುಂಬಿರಲಿ.
4. ವಿಟಮಿನ್ ಬಿ 12: ಸಸ್ಯಾಹಾರಿಗಳಲ್ಲಿ ಬಿ12 ಕೊರತೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಹಾಗಾಗಿ ಹಾಲು, ಮೊಸರುಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಲೇಬೇಕು.
5. ಧ್ಯಾನವಿಲ್ಲದೇ ಬದುಕಿಲ್ಲ: ಪ್ರತಿನಿತ್ಯ ಕಡೇ ಪಕ್ಷ ಹತ್ತು ನಿಮಿಷವಾದರೂ ನಾವು ಧ್ಯಾನ ಮಾಡಲೇಬೇಕು. ಆ 10 ನಿಮಿಷ ಉಳಿದ 23 ಗಂಟೆ 50 ನಿಮಿಷಗಳನ್ನು ಸುಂದರವಾಗಿಸುತ್ತದೆ. ಏಕೆಂದರೆ ಧ್ಯಾನ ಗುಣಪಡಿಸದ ರೋಗವಿಲ್ಲ; ಧ್ಯಾನ ಹೆಚ್ಚಿಸದ ಶಕ್ತಿ ಇಲ್ಲ. ಹಾಗಾಗಿ ಕನಿಷ್ಠ 10 ನಿಮಿಷ ಉಸಿರನ್ನು ಗಮನಿಸುತ್ತಾ ಕುಳಿತುಕೊಳ್ಳೋಣ. ಇಷ್ಟು ಸುಲಭವಾದ ಕ್ರಿಯೆಯಿಂದಲೂ ನಾವು ಅಪಾರ ಚೈತನ್ಯವನ್ನು ಪಡೆದುಕೊಳ್ಳಬಹುದು.
6. ಆರೋಗ್ಯಕರ ಆಹಾರ ನಮ್ಮ ಗುರಿ: ನಾವು ನಮ್ಮ ಕೈಲಾದಷ್ಟು ಜಂಕ್ ಫುಡ್ ಸೇವನೆ ಬಿಡಲೇಬೇಕು. ಇಲ್ಲವಾದರೆ ಇಂದಲ್ಲ ನಾಳೆ ಒಂದಲ್ಲ ಒಂದು ಕಾಯಿಲೆ ಬಂದೇ ಬರುತ್ತದೆ. ಒಳ್ಳೆಯ ಪ್ರಮಾಣದಲ್ಲಿ ಪೊ›ಟೀನ್, ಕೊಬ್ಬು, ನಾರಿನ ಅಂಶ ಇರುವ ಆಹಾರಗಳ ಸೇವನೆ ಮಾಡಬೇಕು. ಅಂದರೆ ಬೇಳೆ ಕಾಳುಗಳು, ತುಪ್ಪ, ಎಣ್ಣೆ, ಒಣಹಣ್ಣುಗಳು, ನಟ್​ಗಳು, ಸೊಪ್ಪು, ಹಣ್ಣುಗಳು, ತರಕಾರಿಗಳು ಹೀಗೆ ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ನಾವು ಸೇವಿಸಬೇಕು. ಅಡುಗೆಗೆ ರಿಫೈನ್ಡ್ ಎಣ್ಣೆ ಬಳಸುವುದನ್ನು ಬಿಟ್ಟು ಗಾಣದ ಎಣ್ಣೆಗಳನ್ನು ಬಳಸುವ ಸಂಕಲ್ಪವನ್ನು ಮಾಡಲೇಬೇಕು.
7. ಅಭ್ಯಂಗ: ನಿತ್ಯವೂ ಅಭ್ಯಂಗ ಮಾಡಿಕೊಂಡವನಿಗೆ ಮುಪ್ಪು, ಸುಸ್ತು, ವಾತರೋಗಗಳು ಸುಲಭವಾಗಿ ಬರುವುದಿಲ್ಲ ಎಂದು ಆಯುರ್ವೆದ ಶಾಸ್ತ್ರ ಹೇಳುತ್ತದೆ. ಹಾಗಾಗಿ ನಿತ್ಯವೂ ಅಭ್ಯಂಗ ಮಾಡಿಕೊಂಡಾಗ ನಮಗೆ ಸೊಂಟನೋವು, ಮಂಡಿನೋವು, ಸಂಧಿನೋವು, ಮಲಬದ್ಧತೆ, ನಿದ್ರಾಹೀನತೆ ಮುಂತಾದ ಎಷ್ಟೋ ತೊಂದರೆಗಳು ಬರಲು ಸಾಧ್ಯವಿಲ್ಲ.
8. ಸರಿಯಾದ ನಿದ್ರೆ: ಮೊಬೈಲ್ ನೋಡುತ್ತಾ, ಟಿವಿ ನೋಡುತ್ತಾ ಅರ್ಧ ರಾತ್ರಿ ಕಳೆದು ಮಲಗಲು ಹೋಗುವುದು ನಮಗೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ನಾವು ಕನಿಷ್ಠ ತುಂಬಾ ತಡವೆಂದರೆ ರಾತ್ರಿ ಹತ್ತರ ಒಳಗೆ ಹಾಸಿಗೆಗೆ ಹೋಗಲೇಬೇಕು. ಐದು-ಹತ್ತು ನಿಮಿಷ ಧ್ಯಾನ ಮಾಡಿ ನಂತರ ನಿದ್ದೆಗೆ ಜಾರಿದರೆ ತುಂಬಾ ಒಳ್ಳೆಯದು. ದಿನದಲ್ಲಿ ಏಳು ತಾಸು ನಾವು ಒಳ್ಳೆಯ ನಿದ್ದೆಯನ್ನು ಮಾಡಿದರೆ ಆರೋಗ್ಯ ಚೆನ್ನಾಗಿರಲು ಸಾಧ್ಯವಾಗುತ್ತದೆ. ಇನ್ನೂ ಹತ್ತಾರು ಪ್ರತಿಜ್ಞೆಗಳನ್ನು ನಾವು ತೆಗೆದುಕೊಳ್ಳಬೇಕಿತ್ತು. ಆದರೆ ಈ ವರ್ಷಕ್ಕೆ ಈ ಎಂಟು ಪ್ರತಿಜ್ಞೆಗಳನ್ನು ಪೂರೈಸೋಣ. ಮುಂದಿನ ವರ್ಷ ಇನ್ನೊಂದಿಷ್ಟು ಪ್ರತಿಜ್ಞೆಗಳಿಂದ ನಮ್ಮ ಆರೋಗ್ಯವನ್ನು ಭದ್ರ ಮಾಡಿಕೊಳ್ಳೋಣ. 2026ರ ಇಡೀ ವರ್ಷ ಪ್ರತಿದಿನವೂ ದೇವ ಧನ್ವಂತರಿಯು ನಮಗೆ ಆರೋಗ್ಯದ ಆಶೀರ್ವಾದವನ್ನು ಮಾಡುತ್ತಲೇ ಇರಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net