ನಂದಗುಡಿ : ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದರಿಂದ ಗಾಳಿ, ನೀರು, ಮಣ್ಣು ಮತ್ತು ವಾತಾವರಣ ಕಲುಷಿತಗೊಂಡು ರೋಗಗಳು ಹರಡುತ್ತವೆ. ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಎಂದು ನಂದಗುಡಿ ಗ್ರಾಪಂ ಕಾರ್ಯದರ್ಶಿ ಉಷಾ ಹೇಳಿದರು.
ಹೊಸಕೋಟೆ ತಾಲೂಕು ನಂದಗುಡಿ ಗ್ರಾಪಂ ಮತ್ತು ಕೆಪಿಎಸ್ ಕಾಲೇಜ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ನೋ ಪ್ಲಾಸ್ಟಿಕ್ ಡೆವ್ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛವಾಗಬೇಕಾದರೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಲು ಸಾರ್ವಜನಿಕರು ಪಣ ತೊಡಬೇಕು. ಪ್ಲಾಸ್ಟಿಕ್ನಲ್ಲಿರುವ ಹಾನಿಕಾರಕ ಅಂಶಗಳು ಮನುಷ್ಯನ ದೇಹದಲ್ಲಿ ನಾನಾ ಹಂತಗಳಲ್ಲಿ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಥೈರಾಯ್ಡ್, ಅಸ್ತಮಾ, ಹೃದಯ ಕಾಯಿಲೆಗಳು, ಕೂದಲು ಮತ್ತು ಚರ್ಮದ ಸಮಸ್ಯೆ, ನರಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಯಾರೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಅಡುಗೆ ಮನೆಯ ಸಾಮಾಗ್ರಿಗಳು ಪ್ಲಾಸ್ಟಿಕ್ಮಯವಾಗುವುದನ್ನು ನಿಲ್ಲಿಸಬೇಕು. ಮಾರುಕಟ್ಟೆಗೆ ತೆರಳಿದಾಗ ಪ್ಲಾಸ್ಟಿಕ್ ಕವರ್ಗಳನ್ನು ನಂಬಿ ಹೋಗಬಾರದು. ಪ್ಲಾಸ್ಟಿಕ್ ಬದಲಾಗಿ ಪರಿಸರಸ್ನೇಹಿ ಬ್ಯಾಗ್ಗಳನ್ನು ಅನುಸರಿಸಿದರೆ ಪರಿಸರ ಸಂರಕ್ಷಣೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.