ಮತದಾರರ ಪರಿಷ್ಕರಣೆಯಲ್ಲಿ ಲೋಪವಾಗದಿರಲಿ

ಅರಸೀಕೆರೆ ನಗರದ ಸೇವಾಲಾಲ್ ಭವನದಲ್ಲಿ ಸಭೆಯನ್ನು ಡಿಸಿ ಲತಾಕುಮಾರಿ ಉದ್ಘಾಟಿಸಿದರು. ಸಂತೋಷ್ ಕುಮಾರ್, ಕೃಷ್ಣಮೂರ್ತಿ ಇದ್ದರು.
ಅರಸೀಕೆರೆ ನಗರದ ಸೇವಾಲಾಲ್ ಭವನದಲ್ಲಿ ಸಭೆಯನ್ನು ಡಿಸಿ ಲತಾಕುಮಾರಿ ಉದ್ಘಾಟಿಸಿದರು. ಸಂತೋಷ್ ಕುಮಾರ್, ಕೃಷ್ಣಮೂರ್ತಿ ಇದ್ದರು.
Published on
ಅರಸೀಕೆರೆ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಬಿಎಲ್‌ಒ ಹಾಗೂ ಸಿಬ್ಬಂದಿ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪ್ರಕ್ರಿಯೆ ಯಶಸ್ಸಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ನಗರದ ಸೇವಾಲಾಲ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಕೇಂದ್ರ ಚುನಾವಣಾ ಆಯೋಗ ಕಾಲ ಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತಿದೆ. 2002ರ ಬಳಿಕ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಕೈಗೆತ್ತಿಕೊಂಡಿದೆ. ಜೂ.30 ರಿಂದ ಜು.29ರವರೆಗೆ ಎಸ್‌ಐಆರ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮನೆ, ಮನೆಗೆ ಭೇಟಿ ನೀಡಲಿದ್ದು, ಹೆಸರು ಸೇರ್ಪಡೆ, ಅನರ್ಹರ ಪತ್ತೆ, ಬದಲಾವಣೆ ಕುರಿತಂತೆ ಅಗತ್ಯ ಮಾಹಿತಿ ನೀಡಬೇಕು. ಎಸ್‌ಐಆರ್ ಕೆಲಸದಲ್ಲಿ ತೊಡಗುವ ಸಿಬ್ಬಂದಿ ಮತದಾರರ ದಾಖಲೆಗಳನ್ನು ಪರಿಶೀಲಿಸಿ ಲೋಪವಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ದಾಖಲೆಗಳ ನೆಪವಿಟ್ಟು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಬಾರದು. ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಎಸ್‌ಐಆರ್‌ನಿಂದಾಗಿ ಲಕ್ಷಾಂತರ ಮತದಾರರು ಅವಕಾಶ ವಂಚಿತರಾಗಿದ್ದಾರೆ. ಇಂತಹ ಕೆಲಸ ರಾಜ್ಯದಲ್ಲಿ ನಡೆಯಬಾರದು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಬೂತ್‌ಮಟ್ಟದಲ್ಲಿ ಎಚ್ಚರಿಕೆ ವಹಿಸಿ ಎಂದು ಹೇಳಿದರು.
ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಲು ಚುನಾವಣಾ ಆಯೋಗ ಮಾನದಂಡ ರೂಪಿಸಿದೆ. 2002ರ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಅಗತ್ಯ ವಿವರ ನೀಡಿ ಪ್ರಕ್ರಿಯೆ ಕ್ರಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಗಾರಿಕೆ ಎಂದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್,ಪೌರಾಯುಕ್ತ ಎಚ್. ಟಿ.ಕೃಷ್ಣಮೂರ್ತಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಬಿಎಲ್‌ಒ ಸೇರಿದಂತೆ ನಾಗರಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net