ಸಮಾಜ ಪರಿವರ್ತನೆಯಲ್ಲಿ ಯುವಜನರು ಕೈಜೋಡಿಸಲಿ

World Red Cross Day programme
World Red Cross Day programme
Published on

ಪ್ರಮುಖ ಮುಖ್ಯಾಂಶಗಳು

  • * ಡಾ. ವೂಡೇ ಪಿ. ಕೃಷ್ಣ ಆಶಯ
  • * ರೆಡ್ ಕ್ರಾಸ್ ದಿನಾಚರಣೆ
  • * ರೋಗಿಗಳಿಗೆ ಕಂಬಳಿ - ಹಣ್ಣು ವಿತರಣೆ
ಬೆಂಗಳೂರು: ಸಮಾಜದಲ್ಲಿ ಸೇವಾಭಾವ, ಕರುಣೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ರೆಡ್ ಕ್ರಾಸ್ ಸಂಸ್ಥೆ ಮಹತ್ವದ ಪಾತ್ರವಹಿಸಿದೆ ಎಂದು ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ಹೇಳಿದ್ದಾರೆ.
‘ಮಾನವೀಯತೆಯಲ್ಲಿ ಒಗ್ಗಟ್ಟು’ ಎಂಬ ೋಷವಾಕ್ಯದೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆ ನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ ಜೀನ್ ಹೆನ್ರಿ ಡ್ಯೂನಾಂಟ್ ಆರಂಭಿಸಿದ ಮಾನವೀಯ ಚಳವಳಿ ರೆಡ್ ಕ್ರಾಸ್ ಮೂಲಕ ಇಂದು ವಿಶ್ವದಾದ್ಯಂತ ಕೋಟಿ ಕೋಟಿ ಜನರಿಗೆ ಆಶಾಕಿರಣವಾಗಿದೆ. ಈ ನಿಟ್ಟಿನಲ್ಲಿ ಯುವಜನರು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜ ಪರಿವರ್ತನೆ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ನಿಸ್ವಾರ್ಥ ಸೇವೆಗೆ ಶತಮಾನ:

ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಕಳೆದ 100 ವರ್ಷಗಳಿಂದ ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ನಂಬಿಕೆಯನ್ನು ಗಳಿಸಿದೆ. ರಕ್ತದಾನದ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ನಿಸ್ವಾರ್ಥ ದಾನಿಗಳ ನೆರವಿನಿಂದಾಗಿ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ರಕ್ತ ಒದಗಿಸುವ ಕಾರ್ಯವನ್ನು ಮಾಡಿಕೊಂಡು ಬಂದಿದೆ ಎಂದರು.
ಇದೇ ವೇಳೆ ಮಾಗಡಿ ರಸ್ತೆಯ ಕುಷ್ಠರೋಗ ಆಸ್ಪತ್ರೆಯ ಒಳರೋಗಿಗಳಿಗೆ ಕಂಬಳಿ ಹಾಗೂ ಹಣ್ಣು ವಿತರಿಸಲಾಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಪ್ರಧಾನ ಕಾರ್ಯದರ್ಶಿ ಉಮಾಕಾಂತ್, ರೆಡ್ ಕ್ರಾಸ್ ಪದಾಧಿಕಾರಿಗಳು, ಯುವ ರೆಡ್ ಕ್ರಾಸ್ ಸ್ವಯಂಸೇವಕರು ಹಾಜರಿದ್ದರು.

ರಕ್ತ ಸಂಗ್ರಹ ಮತ್ತು ಪೂರೈಕೆ ಮಾತ್ರವಲ್ಲದೆ ಪ್ರಕೃತಿ ವಿಕೋಪಗಳು, ಅಪಘಾತಗಳು ಹಾಗೂ ತುರ್ತು ಪರಿಸ್ಥಿತಿಗಳಲ್ಲೂ ರೆಡ್ ಕ್ರಾಸ್ ಸಂಸ್ಥೆಯ ಮಾನವೀಯ ಸೇವೆ ಅತ್ಯಂತ ಅಮೂಲ್ಯವಾದದ್ದು. ಹಾಗಾಗಿ ಸೇವೆ, ಸಹಾನುಭೂತಿ ಮತ್ತು ಮಾನವೀಯತೆ ಎಂಬ ಮೌಲ್ಯಗಳು ಪ್ರತಿಯೊಬ್ಬರ ಜೀವನದಲ್ಲಿ ಬೆಳೆಸಿಕೊಳ್ಳಬೇಕಾದ ಗುಣಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net