ಲಕ್ಕೂರು: ಗ್ರಾಮಗಳಲ್ಲಿ ನಡೆಸುವ ದೇವಿಯ ಕರಗ ಮಹೋತ್ಸವ ಬಹಳ ವಿಶೇಷವಾಗಿರುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಹಾಗೂ ದೇವಾಲಯದ ಪ್ರಧಾನ ಕಾರ್ಯದರ್ಶಿ ವೆಂಕಟೇಶಪ್ಪ ಹೇಳಿದರು. tradition
ಮಾಲೂರು ತಾಲೂಕು ಲಕ್ಕೂರು ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ಶ್ರೀ ದ್ರೌಪದಾಂಬ ದೇವಿ ದೇವಾಲಯದ ಕರಗ ಮಹೋತ್ಸವದ ಅಂಗವಾಗಿ ಶುಕ್ರವಾರ ಮುಂಜಾನೆಯಿಂದಲೇ ದೇವರಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕರಗ ಶಕ್ತ್ಯೋತ್ಸವ ಪ್ರಾಚಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಂಪ್ರದಾಯಗಳನ್ನು ಯುವಕರು ಮುಂದುವರಿಸಿಕೊಂಡು ಹೋಗಬೇಕು. ಕರಗ ಇಂದಿನಿಂದ 5 ದಿನಗಳ ಕಾಲ ನಡೆಯಲಿದೆ ಎಂದರು.
ಫೆ.27ರಂದು ಸಂಜೆ 9 ಗಂಟೆಗೆ ಹಸಿ ಕರಗ ಮಹೋತ್ಸವ, ಫೆ.28ರಂದು ಆರತಿ ತಂಬಿಟ್ಟು ದೀಪೋತ್ಸವದಲ್ಲಿ ನಡೆಯಲಿದ್ದು, ಪ್ರತಿಮನೆ ಮನೆಯಿಂದಲೂ ಹೆಣ್ಣುಮಕ್ಕಳು ದೇವರಿಗೆ ತಂಬಿಟ್ಟು ಆರತಿ ದೀಪೋತ್ಸವ ನಡೆಸಿಕೊಡುತ್ತಾರೆ. ಮಾ.1ರಂದು ಶ್ರೀ ದ್ರೌಪದಾಂಬ ದೇವಿಯ ಹೂವಿನ ಕರಗ ಮಹೋತ್ಸವ ಹಾಗೂ ದೇವರುಗಳ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಮಾ.2ರಂದು ಪುರಾಣಗಾವು, ಮಾ.3ರಂದು ವಸಂತೋತ್ಸವ ಒನಕೆ ಕರಗ ನಡೆಯಲಿದೆ ಎಂದು ತಿಳಿಸಿದರು.
ಅಧ್ಯಕ್ಷ ನಾರಾಯಣಸ್ವಾಮಿ, ಖಜಾಂಚಿ ಸಿ.ಪ್ರಕಾಶ್, ಸದಸ್ಯರಾದ ಶ್ರೀನಿವಾಸ್, ರಾಜಪ್ಪ, ನಾರಾಯಣಸ್ವಾಮಿ, ಕೆ.ಸುರೇಶ್, ಮಹೇಶ್, ಎಂ.ಮುನಿಯಪ್ಪ, ಸಿ.ಮುನಿರಾಜು, ಮುನಿಕೃಷ್ಣ, ರವಿ, ಮಂಜುನಾಥ್, ಆನಂದ್, ಆರ್.ಶಿವಕುಮಾರ್, ಮುರಳಿ ಇದ್ದರು.