ಮುದ್ದೇಬಿಹಾಳ ಪಟ್ಟಣದ ವಿದ್ಯಾಚೇತನ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಪೂಜ್ಯರು, ಗಣ್ಯರು ಉದ್ಘಾಟಿಸಿದರು. ರವಿಕುಮಾರ ಬೆನಕಟಗಿ, ಶ್ರೀದೇವಿ ಬೆನಕಟಗಿ, ಎಸ್.ಬಿ. ಲಿಂಗದಳ್ಳಿ ಮತ್ತಿತರರಿದ್ದರು.
ಮುದ್ದೇಬಿಹಾಳ: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಿಕೊಳ್ಳದೆ ನಿರಂತರ ಅಧ್ಯಯನ ಶೀಲರಾಗುವುದರೊಂದಿಗೆ, ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಮಗುವಿನ ಸರ್ವಾಂಗೀಣ ವ್ಯಕ್ತಿತ್ವ ವಿಕಸನವೇ ಶಿಕ್ಷಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ತಿಳಿಸಿದರು.
ಪಟ್ಟಣದ ವಿದ್ಯಾಚೇತನ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆ ಗುರುತಿಸಿ ಪೂರಕವಾದ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕು ಎಂದರು.
ಬೀಳಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುರಾಜ ಲೂತಿ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಗಂಡು ಹೆಣ್ಣೆಂಬ ಭೇದವಿಲ್ಲದೆ ಪಾಲಕರು ಶಿಕ್ಷಣ ನೀಡಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಭಾವೈಕ್ಯತೆಯ ಸಂಸ್ಥಾನ ಹಿರೇಮಠ ಕುಂಟೋಜಿ ಗುರು ಚನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳಬೇಕು. ಜ್ಞಾನಾರ್ಜನೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಸಂಸ್ಥೆ ಅಧ್ಯಕ್ಷ ರವಿಕುಮಾರ ಬೆನಕಟಗಿ, ಶ್ರೀದೇವಿ ಬೆನಕಟಗಿ, ಎಸ್.ಬಿ. ಲಿಂಗದಳ್ಳಿ, ಎನ್.ಎಸ್. ಹಿರೇಮಠ, ಪಿ.ಸಿ. ಹಡಗಿನಹಾಳ, ಕೆ.ಎಂ. ಪಾಟೀಲ, ಚೈತನ್ಯ ಮುದ್ದೇಬಿಹಾಳ ಮತ್ತಿತರರಿದ್ದರು.