ಬೆಟ್ಟದಪುರ ಸಮೀಪದ ಕೊಣಸೂರು ಗ್ರಾಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ನಡೆದ ಗ್ರಾಮ ಘಟಕ ಉದ್ಘಾಟನೆ ಮತ್ತು ಹಸಿರು ಶಾಲು ದೀಕ್ಷೆ ಸಮಾರಂಭದಲ್ಲಿ ಎಲ್ಲರಿಗೂ ಪ್ರತಿಜ್ಞಾವಿಧಿ ಭೋದಿಸಲಾಯಿತು.
Published on:
Copied
Follow Us
ಬೆಟ್ಟದಪುರ: ರೈತರು ಅನುಭವಿಸುತ್ತಿರುವ ನೂರೆಂಟು ಸಮಸ್ಯೆಗಳನ್ನು ಬಗೆಹರಿಸಲು ರೈತ ಸಂಘಟನೆಯ ಪದಾಧಿಕಾರಿಗಳು ಧ್ವನಿಯಾಗಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಆನಂದಗೆರೆ ಮಂಜುನಾಥ್ ಆರ್. ಗೌಡ ತಿಳಿಸಿದರು.
ಕೊಣಸೂರು ಗ್ರಾಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುರುವಾರ ಆಯೋಜಿಸಿದ್ದ ಗ್ರಾಮ ಘಟಕ ಉದ್ಘಾಟನೆ ಮತ್ತು ಹಸಿರು ಶಾಲು ದೀಕ್ಷೆ ಸಮಾರಂಭದಲ್ಲಿ ಮಾತನಾಡಿದ ಅವರು, 1982ರಲ್ಲಿ ಪ್ರೊ.ನಂಜುಂಡಸ್ವಾಮಿ ಸ್ಥಾಪನೆ ಮಾಡಿದ ಸಂಘವು ಪಚ್ಚೆ ನಂಜುಂಡಸ್ವಾಮಿ ನಾಯಕತ್ವದಲ್ಲಿ, ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ದೊಡ್ಮನೆ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ. ಬೇರೆಯವರ ಮಾತಿಗೆ ಕಿವಿಗೂಡದೆ ಒಟ್ಟು ಸೇರಿ ಕೆಲಸ ಮಾಡೋಣ ಎಂದರು.
ರಾಜ್ಯ ಯುವ ಘಟಕದ ಅಧ್ಯಕ್ಷ ಕೋಮಲಾಪುರ ಸ್ವಾಮಿಗೌಡ ಮಾತನಾಡಿ, ರೈತರಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಕಿಕೊಡುವ ಹಾಗೂ ಗೊಬ್ಬರ ದರದ ವಿಚಾರದಲ್ಲಿ ಸಾಕಷ್ಟು ಅನ್ಯಾಯವಾದಾಗ ಅವರ ಪರನಿಂತು ಸಮಸ್ಯೆ ಬಗೆಹರಿಸಲಾಗಿದೆ. ಯಾವುದೇ ಕಾರಣಕ್ಕೂ ಒಗ್ಗಟ್ಟು ಬಿಟ್ಟು ಕೊಡದೆ ಸಮಸ್ಯೆ ವಿರುದ್ಧ ನಿರಂತರವಾಗಿ ಹೊರಡೋಣ ಎಂದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಾವೇರಮ್ಮ ಮಾತನಾಡಿ, ದೇಶದಲ್ಲಿ ಖಾಸಗೀಕರಣದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಜೆಟ್ ಸಂದರ್ಭ ಸಂಘಟನೆಯಿಂದ ಸರ್ಕಾರದ ಬಾಗಿಲು ತಟ್ಟಿ ಹೋರಾಟ ಮಾಡಲಾಗುವುದು. ಗ್ರಾಮೀಣ ಪ್ರದೇಶದ ರೈತ ಮಹಿಳೆಯರು ನಮ್ಮ ಸಂಘದೊಂದಿಗೆ ಜತೆಗೂಡಿ ಬೆಂಬಲ ನೀಡಬೇಕು. ಎಲ್ಲದಕ್ಕಿಂತ ಮಹಿಳಾ ಶಕ್ತಿ ತನ್ನದೇ ಆದ ವಿಶೇಷ ಶಕ್ತಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಕೊಣಸೂರು ಗ್ರಾಮದ ಸುಮಾರು 80ಕ್ಕೂ ಹೆಚ್ಚು ಸದಸ್ಯರು ಹಾಗೂ ಮುಖಂಡ ಹಸಿರು ಶಾಲು ದೀಕ್ಷೆ ಮೂಲಕ ಸಂಘಟನೆಗೆ ಸೇರ್ಪಡೆಯಾದರು. ಕೊಣಸೂರು ಗ್ರಾಮ ಘಟಕದ ಅಧ್ಯಕ್ಷರಾಗಿ ಅಂಬರೀಷ್, ಉಪಾಧ್ಯಕ್ಷರಾಗಿ ಅಶೋಕ ಹಾಗೂ ಕಾರ್ಯದರ್ಶಿಯಾಗಿ ರಾಜು ಅವರನ್ನು ಸರ್ವ ಸಮ್ಮತಿ ಮೂಲಕ ನೇಮಕ ಮಾಡಲಾಯಿತು. ಎಲ್ಲರಿಗೂ ಸಂಘದ ಪ್ರತಿಜ್ಞಾವಿಧಿ ಭೋದನೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರಯ್ಯ, ಸಂಘದ ರಾಜ್ಯ ಸದಸ್ಯರಾದ ದೇವಶೆಟ್ಟಿ, ಹನಗೋಡು ಪ್ರಕಾಶ್, ಸಮಿತಿ ಸದಸ್ಯ ಯೋಗೇಶ್, ಹಾರನಹಳ್ಳಿ ಅಧ್ಯಕ್ಷ ಶೇಕ್ ಇಕ್ಬಾದುಲ್, ಮುಖಂಡರಾದ ಪ್ರಭು, ಮೂರ್ತಿ, ವಿಜಯ ಸೇರಿದಂತೆ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.