ಮಾಧ್ಯಮಗಳು ಸಮಾಜದ ಜಾಗೃತಿ ವಹಿಸಲಿ

ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ವಿಜಯಾ ಕೋರಿಶೆಟ್ಟಿ, ಪ್ರೊಸೂನ್ ಸೇನ್, ಸಪ್ನಾ ಎಂ.ಎಸ್., ಓಂಕಾರ ಕಾಕಡೆ ಮತ್ತಿತರರಿದ್ದಾರೆ.
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ವಿಜಯಾ ಕೋರಿಶೆಟ್ಟಿ, ಪ್ರೊಸೂನ್ ಸೇನ್, ಸಪ್ನಾ ಎಂ.ಎಸ್., ಓಂಕಾರ ಕಾಕಡೆ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಅಕ್ಕ ಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿಕೆ
  • ಮಕ್ಕಳ ವಿಷಯಗಳ ಕುರಿತು ಕಾರ್ಯಾಗಾರ
ವಿಜಯಪುರ: ಪ್ರಸ್ತುತ ದಿನಗಳಲ್ಲಿ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳು ಮಕ್ಕಳ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುತ್ತಿವೆ. ಪತ್ರಕರ್ತರು ಹಾಗೂ ಮಾಧ್ಯಮಗಳು ಸುದ್ದಿಗಳನ್ನು ಅತ್ಯಂತ ಸಂವೇದನಾಶೀಲವಾಗಿ ಜನರಿಗೆ ತಲುಪಿಸಬೇಕು ಎಂದು ಮಹಿಳಾ ವಿವಿ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹೈದರಾಬಾದ್‌ನ ಯುನಿಸೆಫ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ವಿಷಯಗಳ ಕುರಿತು ಕರ್ನಾಟಕ ರಾಜ್ಯದ ಪತ್ರಕರ್ತರಿಗೆ ಪರಿಚಯ ವಿಷಯದಡಿ ಕಿಶೋರರ ಆರೋಗ್ಯ ಮತ್ತು ಪೌಷ್ಟಿಕತೆ, ಸಾಂಕ್ರಾಮಿಕವಲ್ಲದ ರೋಗಗಳು, ಆರೋಗ್ಯಕರ ಆಹಾರ ಪದ್ಧತಿ ಹಾಗೂ ರಸ್ತೆ ಸುರಕ್ಷತೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹದಿಹರೆಯದ ಮಕ್ಕಳ ಆರೋಗ್ಯ, ಮಕ್ಕಳ ಹಕ್ಕುಗಳು, ರಸ್ತೆ ಸುರಕ್ಷತೆ ಕುರಿತು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಾಧ್ಯಮಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದರು.
ಮುಖ್ಯ ಅತಿಥಿ ಯುನಿಸೆಫ್, ಹೈದರಾಬಾದ್‌ನ ಪ್ರೊಸೂನ್ ಸೇನ್ ಮಾತನಾಡಿ, ಕಿಶೋರ ವಯಸ್ಸಿನ ಮಕ್ಕಳಲ್ಲಿ ಅಸಂಕ್ರಾಮಿಕ ರೋಗಗಳ ಪ್ರಮಾಣ ಹೆಚ್ಚುತ್ತಿವೆ. 11 ರಿಂದ 19 ವರ್ಷದ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯ ಸಮಸ್ಯೆ, ಮಧುಮೇಹ, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿವೆ. ಜಂಕ್ ಫುಡ್ ಸೇವನೆ ಹಾಗೂ ದೈಹಿಕ ಚಟುವಟಿಕೆಗಳ ಕೊರತೆ ಪ್ರಮುಖ ಕಾರಣಗಳಾಗಿವೆ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಮಾತನಾಡಿ, ಪತ್ರಕರ್ತರು ಮಕ್ಕಳ ಸಮಸ್ಯೆಗಳು, ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಸಪ್ನಾ ಎಂ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಾಕೇಶ, ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net