ನುಗ್ಗೇಹಳ್ಳಿ: ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಒತ್ತಾಯಿಸಿದರು.
ಹೋಬಳಿಯ ಕಗ್ಗೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಬರದ ಮುನ್ಸೂಚನೆ ಇದ್ದರೂ ತಾಲೂಕಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಜಾನುವಾರುಗಳಿಗೆ ಮೇವು, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಬೆಳೆ ಬೆಳೆಯಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಬೆಳೆ ಸಾಲ ಮನ್ನಾ ಮಾಡಬೇಕು. ಮುಂದಿನ ಜನವರಿಯಲ್ಲಿ ಶಾಶ್ವತ ಜಲಜೀವನ್ ಯೋಜನೆಯಡಿ ತಾಲೂಕಿನ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಬೃಹತ್ ಯೋಜನೆಗೆ ಚಾಲನೆ ನೀಡಲಾಗುವುದು. ಕಗ್ಗೆರೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೊಳವೆಬಾವಿ ಕೊರೆಸಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ನಾಗೇಂದ್ರ ಬಾಬು, ರಾಧಾಮಣಿ ಬಾಬು, ದೊಡ್ಡೇರಿ ಮಂಜುನಾಥ್, ಹುಲಿಕೆರೆ ಎಚ್.ಪಿ. ಸಂಪತ್ ಕುಮಾರ್, ಹೊನ್ನೇಗೌಡ ಗೋಪಣ್ಣ, ಶೇಖರ್, ರಂಗಸ್ವಾಮಿ ಇತರರು ಇದ್ದರು.