ನಿವೇಶನ ಹಂಚಿಕೆ ಪಾರದರ್ಶಕವಾಗಿರಲಿ

ಬೇಲೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯ ಬಿ.ಗಿರೀಶ್ ಮತ್ತು ಎ.ಆರ್.ಆಶೋಕ್ ನಡುವೆ ಮಾತಿನ ಚಕಮಕಿ ಏರ್ಪಟ್ಟ ಸಂದರ್ಭ ಅಧ್ಯಕ್ಷ ಅಕ್ರಂ ಶರೀಫ್ ಸಮಾಧಾನ ಪಡಿಸುತ್ತಿರುವುದು.
ಬೇಲೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯ ಬಿ.ಗಿರೀಶ್ ಮತ್ತು ಎ.ಆರ್.ಆಶೋಕ್ ನಡುವೆ ಮಾತಿನ ಚಕಮಕಿ ಏರ್ಪಟ್ಟ ಸಂದರ್ಭ ಅಧ್ಯಕ್ಷ ಅಕ್ರಂ ಶರೀಫ್ ಸಮಾಧಾನ ಪಡಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್
  • ಸಭೆಯ ವೇಲಾಪುರಿ ಸಭಾಂಗಣ

ಬೇಲೂರು:

ಪುರಸಭೆಯಿಂದ ಆಶ್ರಯ ಯೋಜನೆಯಡಿ ಅರ್ಹ ಬಡವರಿಗೆ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡುವ ಮೂಲಕ ಅವರ ಮನೆ ಕನಸನ್ನು ನನಸು ಮಾಡಲು ಹಾಗೂ ಪಟ್ಟಣದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್ ಹೇಳಿದರು.

ಪಟ್ಟಣದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ರತಿ ವಾರ್ಡ್‌ನಿಂದ 10 ರಿಂದ 15 ಅರ್ಹ ಬಡವರ ಅರ್ಜಿ ಗುರುತಿಸಲು ಶಾಸಕರು ಸೂಚಿಸಿದ್ದು, ಆಶ್ರಯ ಸಮಿತಿ ಸಭೆಯಲ್ಲಿ ಎಲ್ಲ ಸದಸ್ಯರ ಗಮನಕ್ಕೆ ವಿಷಯ ತರಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಸರ್ಕಾರಿ ಆಸ್ತಿ ಕಬಳಿಕೆ ಕುರಿತು ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಅಲ್ಲದೆ ಹಳೇ ಕಟ್ಟಡ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ತೆರವು ಮಾಡಿದ್ದು, ಈಗ ಅವರಿಗೆ ಖಾತೆ ಮಾಡದಿರಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಬೇಲೂರನ್ನು ಗುಡಿಸಲು ಮುಕ್ತ ನಗರವನ್ನಾಗಿಸುವ ಉದ್ದೇಶದಿಂದ ಆರಂಭದಲ್ಲಿ 57 ಫಲಾನುಭವಿಗಳಿಗೆ ಮಾತ್ರ ನಿವೇಶನ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ನಂತರ ಹೆಚ್ಚಿನವರನ್ನು ಆಯ್ಕೆ ಮಾಡಿರುವುದಕ್ಕೆ ಕಾರಣವೇನು? ಫಲಾನುಭವಿಗಳ ಆಯ್ಕೆಗೂ ಮುನ್ನ ಎಲ್ಲ ಸದಸ್ಯರ ಗಮನಕ್ಕೆ ವಿಷಯ ತರಬೇಕಿತ್ತು. 65 ನಿವೇಶನಗಳ ಹಂಚಿಕೆ ಪ್ರಕ್ರಿಯೆ ನಿಲ್ಲಿಸಿರುವುದೇಕೆ? ಉಳಿದ ನಿವೇಶನಗಳನ್ನು ಯಾವಾಗ ಹಂಚಿಕೆ ಮಾಡಲಾಗುತ್ತದೆ. ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಹಾಗೂ ಇತರ ಅರ್ಹರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಆರ್‌ಐ ಲಕ್ಷ್ಮಣ್ ಮಾತನಾಡಿ, ಪುರಸಭೆಯಲ್ಲಿ ಈ ಹಿಂದೆ 1,200 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಪರಿಶೀಲಿಸಿ ಲಭ್ಯವಿರುವ ಐದು ಎಕರೆ ಜಾಗದಲ್ಲಿ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ಎ.ಆರ್.ಆಶೋಕ್ ಮಾತನಾಡಿ, ಬಡವರು ಸಾವಿರ ಅಥವಾ ಎರಡು ಸಾವಿರ ರೂ. ತೆರಿಗೆ ಬಾಕಿ ಉಳಿಸಿಕೊಂಡರೆ ಕ್ರಮ ಕೈಗೊಳ್ಳುವ ಅಧಿಕಾರಿಗಳು ಲಕ್ಷಾಂತರ ರೂ. ಬಾಕಿ ಉಳಿಸಿ ಕೊಂಡವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಹೊಳೆ ಬೀದಿಯ ಹಿಂದಿನ ಸಾರಾಯಿ ಅಂಗಡಿ ಜಾಗ ಹಾಗೂ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಪುರಸಭೆ ಜಾಗವನ್ನು ಗುರುತಿಸಿ ಪುರಸಭೆ ಆಸ್ತಿ ಎಂಬ ಫಲಕ ಅಳವಡಿಸುವಂತೆ ಹಲವು ಬಾರಿ ಸೂಚಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಮಸ್ಯೆ, ಇ-ಸ್ವತ್ತು ವಿತರಣೆಯಲ್ಲಿನ ವಿಳಂಬ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಕ್ಕೆ ಒತ್ತು ನೀಡಬೇಕೆಂದು ಒತ್ತಾಯಿಸಿದರು.
ಜಗದೀಶ್ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಯುಜಿಡಿ ಸಮಸ್ಯೆ ತೀವ್ರವಾಗಿದೆ. ಮಹಿಳಾ ಕಾಲೇಜು ಸಮೀಪವೇ ಯುಜಿಡಿ ನೀರು ಹರಿಯುತ್ತಿರುವುದರಿಂದ ಕುಡಿಯುವ ನೀರು ಕಲುಷಿತವಾಗುವ ಆತಂಕವಿದೆ. ಅಂತೆಯೇ 41 ಲಕ್ಷ ರೂ. ಮೌಲ್ಯದ ಪುರಸಭೆ ಆಸ್ತಿ ಅಪಾಯದಲ್ಲಿದ್ದು, ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದಿದ್ದರೆ ಬೇರೆ ಅಧಿಕಾರಿಗೆ ಜವಾಬ್ದಾರಿ ನೀಡಬೇಕು. ಇಲ್ಲ ನಾವೇ ಮೇಲ್ಮನವಿ ಸಲ್ಲಿಸಲು ಸಿದ್ಧ. ಬಸವೇಶ್ವರ ವೃತ್ತದಿಂದ ಚನ್ನಕೇಶವ ದೇವಸ್ಥಾನದ ಮುಖ್ಯ ರಸ್ತೆಯವರೆಗೆ ಫುಟ್‌ಪಾತ್ ತೆರವು ಗೊಳಿಸಿ ರಸ್ತೆ ಬದಿ ವಾಹನಗಳನ್ನು ಸ್ಥಳಾಂತರಿಸಲು ಪೊಲೀಸ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.
ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಪಿಡಬ್ಲ್ಯುಡಿ ಹಾಗೂ ಪುರಸಭೆ ವ್ಯಾಪ್ತಿಯ ಹಲವು ಕಾಮಗಾರಿಗಳು ವರ್ಷ ಕಳೆದರೂ ಪೂರ್ಣಗೊಂಡಿಲ್ಲ ಕಾಮಗಾರಿ ವಿಳಂಬಕ್ಕೆ ಸ್ಥಳೀಯ ಶಾಸಕರೇ ಕಾರಣ ಎಂದು ಆಕ್ಷೇಪಿಸಿದರು.
ಜಮಾಲುದ್ದೀನ್ ಮಾತನಾಡಿ, ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಹೊಳೆ ಬೀದಿ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಎಸ್‌ಟಿಪಿ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಯುಜಿಡಿ ಲೈನ್‌ಗಳು ಓವರ್‌ಫ್ಲೋ ಆಗುತ್ತಿವೆ. ಮಳೆಗಾಲದಲ್ಲಿ ಕೊಳಚೆ ನೀರು ರಸ್ತೆ, ದರ್ಗಾ, ಅಶ್ವಥ್ ಕಟ್ಟೆ ಹಾಗೂ ಶಾಲಾ ಆವರಣದಲ್ಲಿ ಹರಿಯುತ್ತಿದೆ. ಖಾಸಗಿ ಕಂಪನಿಗಳಿಗೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಗೆ ಅನುಮತಿ ನೀಡಿದ್ದರಿಂದ ನಾಲ್ಕೈದು ಮ್ಯಾನ್‌ಹೋಲ್‌ಗಳು ತುಂಬಿ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. 2 ಕೋಟಿ ರೂ, ಯುಜಿಡಿ ಕಾಮಗಾರಿಯೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಈ ಸಮಸ್ಯೆಯನ್ನು ಮೊದಲು ಪರಿಹರಿಸಬೇಕು ಎಂದರು.
***ರತ್ನಕ್ಕ ಮಾತನಾಡಿ, ಒಂದು ಬಾರಿ ಬೀದಿ ದೀಪ ಅಳವಡಿಸಿದ್ದು ಬಿಟ್ಟರೆ ನಂತರ ಹಾಕಿಲ್ಲ. ನಮ್ಮ ಅವಧಿಯೊಳಗೆ ಎಲ್ಲ ಬೀದಿಗಳಿಗೂ ಬೀದಿ ದೀಪ ಅಳವಡಿಸಿ ಅನುಕೂಲ ಕಲ್ಪಿಸಿ ಎಂದರು.
ಮೀನಾಕ್ಷಿ ವೆಂಕಟೇಶ್ ಮಾತನಾಡಿ, 1ನೇ ವಾರ್ಡ್ ಅನ್ನು ಕಡೆಗಾಣಿಸಲಾಗಿದೆ. ಸ್ವಚ್ಛತೆ ಸಹ ಆಗುತ್ತಿಲ್ಲ ಎಂದರು.
ಜಮೀಲಾ ತೌಫಿಕ್ ಮಾತನಾಡಿ, 4ನೇ ವಾರ್ಡ್‌ನಲ್ಲಿ ಒಳಚರಮಡಿ ಕಾಮಗಾರಿ 5 ವರ್ಷದಿಂದ ನಡೆಯುತ್ತಿದ್ದು, ಇನ್ನೂ ಪೂರ್ತಿಯಾಗಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಕೆಲಸ ಮಡಿಸಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಉಪಾಧ್ಯಕ್ಷೆ ಉಷಾ ಸತೀಶ್, ಮುಖ್ಯಾಧಿಕಾರಿ ಬಸವರಾಜ ಶಿಗ್ಗಾವಿ ಇದ್ದರು.

ಬಿ.ಗಿರೀಶ್ ಬಗರ್ ಹುಕುಂ ವಿಷಯ ಕುರಿತು ಮಾತನಾಡುವ ವೇಳೆ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರ ಹೆಸರನ್ನು ಉಲ್ಲೇಖಿಸಿದಾಗ, ಮಾಜಿ ಅಧ್ಯಕ್ಷ ಎ.ಆರ್.ಅಶೋಕ್ ಮಧ್ಯಪ್ರವೇಶಿಸಿ, ಪುರಸಭೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಚರ್ಚಿಸುವಂತೆ ಸೂಚಿಸಿದರು. ಇದರಿಂದ ಕೆಲಕಾಲ ಸಭೆಯಲ್ಲಿ ಗಿರೀಶ್ ಮತ್ತು ಅಶೋಕ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭ ಅಧ್ಯಕ್ಷ ಅಕ್ರಂ ಶರೀಫ್ ಮಧ್ಯ ಪ್ರವೇಶಿಸಿ, ಮಾಜಿ ಶಾಸಕ ಲಿಂಗೇಶ್ ಒಳ್ಳೆಯ ವ್ಯಕ್ತಿ. ಅವರ ಬಗ್ಗೆ ಇಲ್ಲಿ ಚರ್ಚೆ ಮಾಡುವ ಅಗತ್ಯವಿಲ್ಲ. ಅವರು ನೋವಿನಲ್ಲಿದ್ದಾರೆ. ಆದ್ದರಿಂದ ಪುರಸಭೆ ವಿಚಾರಗಳ ಬಗ್ಗೆ ಮಾತ್ರ ಚರ್ಚಿಸೋಣ ಎಂದು ಹೇಳಿ ಇಬ್ಬರನ್ನೂ ಸಮಾದಾನಗೊಳಿಸಿ ಸಭೆ ಮುಂದುವರಿಸಿದರು.

ಬೇಲೂರು ದೇಗುಲದ ಪ್ರಮುಖ ಶಿಲ್ಪಿ ಜಕಣಾಚಾರ್ಯರ ಪುತ್ಥಳಿ ನಿರ್ಮಿಸಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಪಟ್ಟಣದ ಹರ್ಡೀಕರ್ ವೃತ್ತದಲ್ಲಿ ನಿರ್ಮಿಸಲು ಸಭೆ ಒಮ್ಮತದ ನಿರ್ಣಯ ಕೈಗೊಂಡು, ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ವಾರ್ಡ್‌ನಲ್ಲಿ ಎರಡು ತಿಂಗಳಿಂದ ಯುಜಿಡಿ ಸಮಸ್ಯೆ ತೀವ್ರವಾಗಿದೆ ಮಹಿಳಾ ಕಾಲೇಜು ಸಮೀಪವೇ ಯುಜಿಡಿ ನೀರು ಹರಿಯುತ್ತಿರುವುದರಿಂದ ಕುಡಿಯುವ ನೀರು ಕಲುಷಿತವಾಗುವ ಆತಂಕ ಇದ್ದು, ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇಲ್ಲಿ ಇಂದೆ ಕೆಲಸ ಮಾಡಿಸದಿದ್ದಲ್ಲಿ ಧರಣಿ ನಡೆಸುತ್ತೇನೆ ಎಂದು ಜಗದೀಶ್, ಸಭಾಧ್ಯಕ್ಷರ ಮುಂದೆ ಧರಣಿ ಕುಳಿತರು. ಅಲ್ಲಿ ಇಂದಿನಿಂದ ಕೆಲಸ ನಡೆಯುತ್ತಿದೆ. ಬೇಗ ಮುಗಿಸುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ ನಂತರ ಆಸನಕ್ಕೆ ಬಂದು ಕುಳಿತರು.

ಚಿತ್ರ:4(ಬಿಎಲ್‌ಆರ್)2-
ಬಿಕ್ಕೋಡು ರಸ್ತೆಯಲ್ಲಿನ ಯುಜಿಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ವೇದಿಕೆ ಮುಂದೆ ಧರಣಿ ಕುಳಿತ ಸದಸ್ಯ ಜಗದೀಶ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net