ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕುಮುದ್ಬೇನ್ ದರಬಾರ ಬಿಬಿಎ, ಬಿಸಿಎ ಹಾಗೂ ಬಿ.ಕಾಂ. ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ರಮೇಶ ಬಲ್ಲಿದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜೇಶ ದರಬಾರ, ಸೋಮನಗೌಡ ಪಾಟೀಲ ಮತ್ತಿತರರಿದ್ದಾರೆ.
ವಿಜಯಪುರ: ಸದ್ಯದ ಆಧುನಿಕತೆಯ ಮೊಬೈಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಹೆಚ್ಚಾಗಿ ಅವಲಂಬಿಸದೇ ಸತತ ಅಧ್ಯಯನ ಮತ್ತು ಕ್ರೀಡೆಗಳ ಕಡೆಗೆ ಗಮನ ಹರಿಸುವ ಮೂಲಕ ಸಾಧನೆಗೈಯಬೇಕು ಎಂದು ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜೇಶ ದರಬಾರ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾವರ್ಧಕ ಸಂಘದ ಬಿ.ವಿ. ದರಬಾರ ಪದವಿ ಮಹಾವಿದ್ಯಾಲಯ ಹಾಗೂ ದ್ವಾರಕಾದಾಸ ವಿಠ್ಠಲದಾಸ ದರಬಾರ ಮೆಮೋರಿಯಲ್ ಟ್ರಸ್ಟ್‌ನ ಕುಮುದ್ಬೇನ್ ದರಬಾರ ಬಿಬಿಎ, ಬಿಸಿಎ ಹಾಗೂ ಬಿ.ಕಾಂ. ಮಹಾವಿದ್ಯಾಲಯದ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಹೊರ್ತಿಯ ಸರ್ವೋದಯ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಮೇಶ ಬಲ್ಲಿದ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಕಲಿಯುವ ಹಂಬಲವಿದ್ದಲ್ಲಿ ಎಷ್ಟೇ ಕಷ್ಟ-ಅಡೆತಡೆಗಳು ಬಂದರು ಕೂಡ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.
ಮುಖ್ಯ ಅತಿಥಿ ಸೋಮನಗೌಡ ಪಾಟೀಲ ಮಾತನಾಡಿ, ಸಮಯದ ಸದುಪಯೋಗ ಪಡಿಸಿಕೊಂಡು ತಮ್ಮ ತಂದೆ-ತಾಯಿಯರ ತ್ಯಾಗವನ್ನು ಸ್ಮರಿಸಬೇಕು ಎಂದರು.
ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ರಮೇಶ ಬಲ್ಲಿದ ಅವರನ್ನು
ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಎಚ್. ಮಣೂರ ಉಪಸ್ಥಿತಿ ವಹಿಸಿದ್ದರು. ಪ್ರಾಚಾರ್ಯ ಡಾ. ವಿ.ಬಿ. ಗ್ರಾಮಪುರೋಹಿತ ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು. ವಿದ್ಯಾರ್ಥಿ ಪ್ರತಿನಿಧಿ ದೀಪಿಕಾ ಪಾರಮಾರ ವಂದಿಸಿದರು.