ಅರಕಲಗೂಡು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಜಾಗೃತಿ ಕುರಿತು ಮಾಹಿತಿ ನೀಡಲಾಯಿತು. ಪರಶುರಮ ಶಿರೂರ, ಅನಂತರಾಜು, ಜಿ.ಎಸ್. ವಾಸುದೇವ ಜಿ.ಎಸ್. ಕೆ.ಜಿ. ರವಿ, ಸುಧಾರಾಣಿ, ಪಲ್ಲವಿ ಇದ್ದರು.
ಹದಿಹರೆಯದ ವಯಸ್ಸಿನಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಸಹಜವಾಗಿದ್ದು, ವಿದ್ಯಾರ್ಥಿಗಳು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಆಪ್ತಸಮಾಲೋಚಕ ಪರಶುರಾಮ ಶಿರೂರ ಸಲಹೆ ನೀಡಿದರು.
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಸಹಯೋಗದಲ್ಲಿ ತಾಲೂಕಿನ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಶನಿವಾರ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಹದಿಹರೆಯದ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಹದಿಹರೆಯದಲ್ಲಿ ರೂಢಿಸಿಕೊಳ್ಳುವ ಉತ್ತಮ ಅಭ್ಯಾಸಗಳು ಭವಿಷ್ಯವನ್ನು ರೂಪಿಸುತ್ತವೆ. ಆರೋಗ್ಯವಾಗಿದ್ದರೆ ಮಾತ್ರ ಚೆನ್ನಾಗಿ ಓದಲು, ಆಟವಾಡಲು ಹಾಗೂ ಜೀವನದ ಗುರಿಗಳನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಪೌಷ್ಟಿಕ ಹಾಗೂ ಸಮತೋಲನ ಆಹಾರ ಸೇವಿಸಬೇಕು. ಜಂಕ್‌ಫುಡ್, ಚಿಪ್ಸ್ ಮತ್ತು ತಂಪುಪಾನೀಯಗಳನ್ನು ಕಡಿಮೆ ಮಾಡಿ, ಹಣ್ಣು, ತರಕಾರಿ, ಹಾಲು, ಮೊಟ್ಟೆ ಹಾಗೂ ಬೇಳೆಕಾಳುಗಳನ್ನು ಸೇವಿಸಬೇಕು. ಉಪಾಹಾರವನ್ನು ತಪ್ಪಿಸಬಾರದು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು, ನಿಯಮಿತವಾಗಿ ಸ್ನಾನ ಮಾಡುವುದು, ಹಲ್ಲುಜ್ಜುವುದು ಹಾಗೂ ಸ್ವಚ್ಛ ಬಟ್ಟೆ ಧರಿಸುವುದು ಅಗತ್ಯ. ಋತುಚಕ್ರದ ಸಂದರ್ಭದಲ್ಲಿ ಬಾಲಕಿಯರು ವೈಯಕ್ತಿಕ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಮಾನಸಿಕ ಆರೋಗ್ಯದ ಬಗ್ಗೆಯೂ ಜಾಗೃತಿ ಮೂಡಿಸಿದ ಅವರು, ಕೋಪ, ದುಃಖ ಮತ್ತು ಒತ್ತಡದಂತಹ ಭಾವನೆಗಳು ಎದುರಾದಾಗ ಪಾಲಕರು, ಶಿಕ್ಷಕರು ಅಥವಾ ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಕ್ರೀಡೆ ಹಾಗೂ ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು ಎಂದು ಹೇಳಿದರು.
ಗುಟ್ಕಾ, ಸಿಗರೇಟ್, ಮದ್ಯ ಹಾಗೂ ಮಾದಕ ವಸ್ತುಗಳಿಂದ ದೂರವಿದ್ದು, ಸ್ನೇಹಿತರ ಒತ್ತಾಯಕ್ಕೂ ಮಣಿಯದೆ ನೋ ಎಂದು ಹೇಳುವ ಧೈರ್ಯ ಬೆಳೆಸಿಕೊಳ್ಳಬೇಕು. ತಮ್ಮ ದೇಹದ ಸುರಕ್ಷತೆ ಹಾಗೂ ವೈಯಕ್ತಿಕ ಗಡಿಗಳನ್ನು ಅರಿತುಕೊಂಡು, ಯಾರಾದರೂ ಅಸಭ್ಯವಾಗಿ ವರ್ತಿಸಿದರೆ ತಕ್ಷಣ ಪಾಲಕರು ಇಲ್ಲವೇ ಶಿಕ್ಷಕರ ಗಮನಕ್ಕೆ ತರಬೇಕು ಕಿವಿಮಾತು ಹೇಳಿದರು.