ರೈತರು ಭತ್ತದ ಕೃಷಿಯನ್ನು ಮುಂದುವರಿಸಲಿ

ಮಕ್ಕಂದೂರು- ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟದ ವತಿಯಿಂದ ನಡೆದ ಆಟಿ ಜಂಬರ ಕಾರ್ಯಕ್ರಮವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಉದ್ಘಾಟಿಸಿದರು. ಎಡಿಕೇರಿ ಪ್ರಸನ್ನ, ಮೂಟೇರ ಪುಷ್ಪಾವತಿ ರಮೇಶ್, ಕಡ್ಲೆರ ತುಳಸಿ ಮೋಹನ್, ಪುದಿಯನೆರವನ ರೇವತಿ ರಮೇಶ್ ಮತ್ತಿತರರು ಇದ್ದರು.
ಮಕ್ಕಂದೂರು- ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟದ ವತಿಯಿಂದ ನಡೆದ ಆಟಿ ಜಂಬರ ಕಾರ್ಯಕ್ರಮವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಉದ್ಘಾಟಿಸಿದರು. ಎಡಿಕೇರಿ ಪ್ರಸನ್ನ, ಮೂಟೇರ ಪುಷ್ಪಾವತಿ ರಮೇಶ್, ಕಡ್ಲೆರ ತುಳಸಿ ಮೋಹನ್, ಪುದಿಯನೆರವನ ರೇವತಿ ರಮೇಶ್ ಮತ್ತಿತರರು ಇದ್ದರು.
Published on

ಮಡಿಕೇರಿ:

ರೈತರು ಬೇಸಾಯದಿಂದ ವಿಮುಖರಾಗದೆ ಭತ್ತದ ಕೃಷಿಯನ್ನು ಮುಂದುವರಿಸಬೇಕು ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಹೇಳಿದರು.


ಮಕ್ಕಂದೂರು- ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಆಟಿ ಜಂಬರ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಟಿ ತಿಂಗಳು ವೈಜ್ಞಾನಿಕವಾಗಿಯೂ, ಸಾಂಪ್ರದಾಯಿಕವಾಗಿಯೂ ವಿಶೇಷ ಮಹತ್ವ ಹೊಂದಿದೆ. ಈ ಸಂದರ್ಭದಲ್ಲಿ ಸಿಗುವ ಸಾಂಪ್ರದಾಯಿಕ ಆಹಾರ ಪದಾರ್ಥಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.


ಗೌಡ ಮಹಿಳಾ ಒಕ್ಕೂಟದ ಕಚೇರಿ ನಿರ್ಮಾಣಕ್ಕೆ 25 ಸಾವಿರ ರೂ. ಹಾಗೂ ಗೌಡ ಸಮಾಜದ ಕಟ್ಟಡ ಅಭಿವೃದ್ಧಿಗೆ 1 ಲಕ್ಷ ರೂ. ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.


ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಮಕ್ಕಂದೂರು ಮುಕ್ಕೋಡ್ಲು ಗೌಡ ಸಮಾಜದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದರು.


ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ:

ಕೊಡಗು-ದಕ್ಷಿಣ ಕನ್ನಡ ಗೌಡ ಒಕ್ಕಲಿಗರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೇರ ಪುಷ್ಪಾವತಿ ರಮೇಶ್ ಮಾತನಾಡಿ, ಗೌಡ ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಮೂಲಸೌಕರ್ಯ ಹಾಗೂ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು ಎಂದರು.


ಗೌಡ ಯುವ ವೇದಿಕೆಯ ಸಹಯೋಗದೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಒಕ್ಕಲಿಗ, ಅರೆಭಾಷೆ ಹಾಗೂ ತುಳು ಜಾನಪದ ಶೈಲಿಯ ಹಾಡುಗಳನ್ನು ಸಿಡಿ ರೂಪದಲ್ಲಿ ಹೊರತರುವ ಉದ್ದೇಶವಿದೆ ಎಂದು ಹೇಳಿದರು.


ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ಕೊಡಗು-ದಕ್ಷಿಣ ಕನ್ನಡ ಗೌಡ ಒಕ್ಕಲಿಗರ ಮಹಿಳಾ ಒಕ್ಕೂಟದ ಸ್ಥಾಪಕಾಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ಸ್ಕೌಟ್ಸ್ ಆಂಡ್ ಗೈಡ್ಸ್ ತರಬೇತಿ ಆಯುಕ್ತ ಕುಂಬಗೌಡನ ರಂಜಿತ್, ಮಕ್ಕಂದೂರು ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ತೂಟೆರ ನವೀನ ಕುಮಾರಿ, ಗೌಡ ಸಮಾಜದ ಉಪಾಧ್ಯಕ್ಷ ಕೊಟ್ಟಕೇರಿಯನ ಪ್ರದೀಪ್ ಮಾತನಾಡಿದರು. ಮಕ್ಕಂದೂರು ಮುಕ್ಕೋಡ್ಲು ಗೌಡ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚೀಯಂಡಿ ಸುಜಯ್, ಪದಾಧಿಕಾರಿಗಳಾದ ಚೌಕಿ ರಘು ತಿಮ್ಮಯ್ಯ, ಅಣ್ಣಚ್ಚಿರ ಸತೀಶ್, ಕುಂಬಗೌಡನ ಮಧು, ಲಕ್ಕಪ್ಪನ ವಿಜೇತ, ಮಾನಡ್ಕ ಮಂಜು, ತೇಲಬೈಲು ದಿನೇಶ್, ಈರೇಗೌಡನ ತೀರ್ಥ ಮತ್ತಿರರು ಇದ್ದರು.

ಮಹಿಳೆಯರು ವೇದಿಕೆಯ ಮುಂಭಾಗದಲ್ಲಿ ಸಾಂಪ್ರದಾಯಿಕವಾಗಿ ಅಗೆ ತೆಗೆಯುವ ಮೂಲಕ ಆಟಿ ಜಂಬರಕ್ಕೆ ಚಾಲನೆ ನೀಡಿದ್ದು ವಿಶೇಷ ಆಕರ್ಷಣೆಯಾಗಿತ್ತು. ಆಟಿ ತಿಂಗಳ ಸಾಂಪ್ರದಾಯಿಕ ಆಚರಣೆ, ವಿಶಿಷ್ಟ ಆಹಾರ ಪದ್ಧತಿ ಹಾಗೂ ಗೌಡ ಸಮುದಾಯದ ಸಾಂಸ್ಕೃತಿಕ ವೈಭವ ಆಟಿ ಜಂಬರದಲ್ಲಿ ಅನಾವರಣಗೊಂಡಿತು. ಮಹಿಳೆಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿಕೊಂಡು ಬಂದಿದ್ದ ಸಾಂಪ್ರದಾಯಿಕ ಖಾದ್ಯಗಳು ಎಲ್ಲರ ಗಮನ ಸೆಳೆದವು. ಆಟಿ ಪಾಯಸ, ಬಗೆ ಬಗೆಯ ಹಿಟ್ಟು, ಪತ್ರೊಡೆ, ಕಣಿಲೆ ಪಲ್ಯ, ಅಕ್ಕಿ ರೊಟ್ಟಿ, ಮಾವಿನಹಣ್ಣಿನ ಸಾರು, ಬೈನೆ ಹುಡಿಯ ಹಲ್ವಾ, ತರಕಾರಿ ಇಡ್ಲಿ, ಪಾಪಿಟ್ಟು, ಹಣ್ಣಿನ ರಸಾಯನ, ಚರ್ಮೆ ಸೊಪ್ಪಿನ ಪಲ್ಯ, ಕೆಸ ಸಾರು, ನೀರು ದೋಸೆ, ಕೈಹುಳಿ ಚಟ್ನಿ, ಬಟರ್ ಫ್ರೂಟ್ ಹಲ್ವ.. ಹೀಗೆ ಬಗೆ ಬಗೆಯ ಆಟಿ ಹಬ್ಬದೂಟ ಘಮ ಘಮಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net