

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ - ತಾಳುಬೆಟ್ಟ ಮಾರ್ಗದ ತಡೆಗೋಡೆಯ ಮೇಲೆ ಚಿರತೆ ಕಾಣಿಸಿಕೊಳ್ಳುತ್ತಿರುವುದು ಮರುಕಳುಹಿಸುತ್ತಿದ್ದು, ಬುಧವಾರ ರಾತ್ರಿಯೂ ಪ್ರತ್ಯಕ್ಷವಾಗಿದೆ.
ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ಧಾಮಮದ ನಡುವೆ ಹಾದು ಹೋಗಿದ್ದು, ಈ ಹಿಂದೆ ಚಿರತೆಗಳು ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚಿಗೆ ರಾತ್ರಿ ವೇಳೆ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಕಳೆದ ತಿಂಗಳ ಹಿಂದೆ ಚಿರತೆ ಮರಿಗಳು ರಾತ್ರಿ ವೇಳೆ 2 ಬಾರಿ ಕಾಣಿಸಿಕೊಂಡು ಭಕ್ತರಲ್ಲಿ ಆತಂಕ ಉಂಟು ಮಾಡಿದ್ದವು. ಜತೆಗೆ ಜ.11 ರಂದು ಈ ಮಾರ್ಗದ ರಂಗಸ್ವಾಮಿ ಒಡ್ಡುವಿನ ಸಮೀಪದ ತಡೆಗೋಡೆಯ ಮೇಲೆ 2 ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ಸಂಚರಿಸುತ್ತಿದ್ದ ಭಕ್ತರು ಭಯಬೀತರಾಗಿದ್ದರು. ಇದೀಗ ರಾತ್ರಿ ಈ ಮಾರ್ಗದಲ್ಲಿ ಮತ್ತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ. ಇದರ ದೃಶ್ಯವನ್ನ ಭಕ್ತರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದು, ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಎಚ್ಚರಿಕೆಯಿಂದ ತೆರಳುವಂತೆ ಸಲಹೆ ನೀಡಿದ್ದಾರೆ.
ಈ ಮಾರ್ಗದಲ್ಲಿ ಒಂದು ತಿಂಗಳಿನಿಂದಲೂ ರಾತ್ರಿ ವೇಳೆ ಆಗ್ಗಾಗ್ಗೆ ಚಿರತೆ ಹಾಗೂ ಮರಿಗಳು ಕಾಣಿಸಿಕೊಳ್ಳುತ್ತಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ದಾಳಿ ನಡೆಸಿ ಪ್ರಾಣಾಪಾಯ ಸಂಭವಿಸಿದರೆ ಯಾರು ಹೊಣೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಇನ್ನು ಮುಂದಾದರೂ ಈ ಬಗ್ಗೆ ಗಮನಹರಿಸಿ ಚಿರತೆಗಳು ರಸ್ತೆ ಬದಿ ಕಾಣಿಸಿಕೊಳ್ಳದಂತೆ ಅಗತ್ಯ ಕ್ರಮವಹಿಸುವಂತೆ ಭಕ್ತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.