ಶಿವಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಆಶ್ರಯ ಪಡೆದಿರುವ ಚಿರತೆಗಳು ಗೊಲ್ಲರಹಟ್ಟಿಗೆ ರಾತ್ರಿ ವೇಳೆ ಲಗ್ಗೆ ಇಟ್ಟಿದ್ದು, ಈ ದೃಶ್ಯಗಳು ಸ್ಥಳಿಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ. ದೃಶ್ಯಾವಳಿಗಳನ್ನು ಗಮನಿಸಿದ ಗ್ರಾಮಸ್ಥರು ತಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಒಂದೇ ರಾತ್ರಿಯಲ್ಲಿ ಕರಡಿ ಹಾಗೂ ಚಿರತೆಗಳೆರಡೂ ಕಾಣಿಸಿಕೊಂಡಿರುವುದರಿಂದ ಮುಂಜಾನೆ ಮತ್ತು ಸಂಜೆ ವೇಳೆ ಕಾರ್ಖಾನೆಗಳಿಗೆ ತೆರಳುವ ಕಾರ್ಮಿಕರು, ರೈತರು ಹಾಗೂ ಶಾಲಾ&ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಶಿವಗಂಗೆ ಸಮೀಪ ಚಿರತೆಯೊಂದು ಮಹಿಳೆಯ ಮೇಲೆ ದಾಳಿ ಮಾಡಿದ್ದರಿಂದ ಜನರ ಆತಂಕ ಇಮ್ಮಡಿಯಾಗಿದೆ.