ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ

ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿಯಿಂದಾಗಿ ಗಾಯಗೊಂಡಿರುವುದು.
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿಯಿಂದಾಗಿ ಗಾಯಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜಮಖಂಡಿ ತಾಲೂಕಿನಲ್ಲಿ ಮತ್ತೆ ಆತಂಕ
  • ಅಧಿಕಾರಿಗಳಿಂದ ಸಿಗದ ಸ್ಪಂದನೆ
ಜಮಖಂಡಿ: ತಾಲೂಕಿನ ಕುಂಚನೂರ, ತುಬಚಿ ಗ್ರಾಮಗಳಲ್ಲಿ ಹಸು, ಕರು ಮತ್ತು ನಾಯಿಗಳ ಮೇಲೆ ದಾಳಿ ನಡೆಸಿದ್ದ ಚಿರತೆ ಭೀತಿ ಮಾಸುವ ಮುನ್ನವೇ, ಈಗ ಹಿಪ್ಪರಗಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ತಾಲೂಕಿನ ಹಿಪ್ಪರಗಿ ಗ್ರಾಮದ ರೈತ ಈರಪ್ಪ ವಜ್ಜರವಾಡ ಎಂಬುವವರ ತೋಟದ ಮನೆ ಮುಂಭಾಗ ಮಂಗಳವಾರ ರಾತ್ರಿ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ ಮಾಡಿದೆ. ದಾಳಿಗೆ ಕರುವಿನ ಕಾಲು ಮತ್ತು ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ. ಕರು ಚೀರಾಡಲು ಆರಂಭಿಸಿದಾಗ ಸಮೀಪದಲ್ಲಿದ್ದ ರೈತ ಈರಪ್ಪ ಹೊರಬಂದು ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಚಿರತೆ ಕರುವನ್ನು ಬಿಟ್ಟು ಓಡಿಹೋಗಿದೆ ಎಂದು ರೈತರು ತಿಳಿಸಿದ್ದಾರೆ.
ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿಯೂ ಭಯದ ವಾತಾವರಣ ಮೂಡಿದೆ. ಕಳೆದ ಎರಡು-ಮೂರು ತಿಂಗಳ ಹಿಂದೆ ಜಂಬಗಿ ಬಿ.ಕೆ. ಗ್ರಾಮದಲ್ಲಿ ರೈತರೇ ತಂದು ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿತ್ತು. ಇದರಿಂದ ತಾಲೂಕಿನಾದ್ಯಂತ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಅನ್ನದಾತರ ನಿದ್ದೆಗೆಡಿಸಿದೆ.
ಕೃಷ್ಣಾನದಿ ತೀರಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ರೈತರು ಹೆಚ್ಚಾಗಿ ಜಾನುವಾರುಗಳನ್ನು ಬಯಲಲ್ಲೇ ಕಟ್ಟಿಹಾಕುತ್ತಾರೆ. ಈಗ ಚಿರತೆ ಕಾಣಿಸಿಕೊಂಡು ದಾಳಿ ಮಾಡುತ್ತಿರುವುದರಿಂದ ಪ್ರಾಣಿಗಳ ಜೀವಕ್ಕೆ ಸಂಚಕಾರ ಬಂದಿದೆ.
ಹಿಪ್ಪರಗಿಯಲ್ಲಿ ಚಿರತೆ ದಾಳಿ ಮಾಡಿದೆ ಎಂದಿದ್ದಾರೆ ಅದರ ಮೇಲೆ ಚಲನವಲನ ಇಡಲು ಕ್ಯಾಮರಾ ಅಳವಡಿಸಬೇಕಾಗುತ್ತದೆ ಇದಕ್ಕೆ ಮೇಲಾಧಿಕಾರಿಗಳ ಪರವಾನಗಿ ಪಡೆಯಲು ಪತ್ರ ಬರೆಯಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಅಧಿಕಾರಿಗಳಿಗೆ ಹೇಳಿದರೆ, ಅದು ಚಿರತೆ ಅಲ್ಲ. ಸುಳ್ಳು ಹೇಳಬೇಡಿ ಅದು ಬೇರೆ ಪ್ರಾಣಿ ಇರಬಹುದು ಅದನ್ನು ವಿಚಾರ ಮಾಡುತ್ತೇವೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರು ಮಂಗಳವಾರ ರಾತ್ರಿ ಬಂದು ಹೋದವರು ಮತ್ತೆ ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ವ್ಯಾಪ್ತಿಯ ಪ್ರದೇಶದಲ್ಲಿ ಸಣ್ಣ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವೇಳೆ ಮಕ್ಕಳ ಮೇಲೆ ದಾಳಿಯಾದರೆ ಯಾರು ಹೊಣೆ? ಎಂದು ಗ್ರಾಮದ ರೈತರು ಪ್ರಶ್ನಿಸಿದ್ದಾರೆ.
ಕೂಡಲೇ ಅರಣ್ಯ ಇಲಾಖೆ ಕಾರ್ಯ ಪ್ರವೃತ್ತರಾಗಿ ಬೋನು ಇರಿಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮದ ನಿಂಗನಗೌಡ ಪಾಟೀಲ, ಪ್ರಕಾಶ ಪಾಟೀಲ, ತಂಗೆವ್ವ ಹೊಸಮನಿ, ಆಶಾ ಲಕ್ಕಪ್ಪಗೊಳ, ಶೋಭಾ ಲಕ್ಕಪ್ಪಗೊಳ, ಬೌರವ್ವ ಕರಬಸನ್ನವರ, ಬಸು ಬನ್ನಿಗಿಡದ ಸೇರಿ ಹಲವರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net