ನಾಗಮಲೆ ಬಳಿ ಚಿರತೆ ಅಟ್ಟಹಾಸ: ಮಹದೇಶ್ವರನ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ 10 ವರ್ಷದ ಬಾಲಕ ಸಾವು! Leopard Attack

ನಾಗಮಲೆ ಬಳಿ ಚಿರತೆ ಅಟ್ಟಹಾಸ: ಮಹದೇಶ್ವರನ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ 10 ವರ್ಷದ ಬಾಲಕ ಸಾವು!
ನಾಗಮಲೆ ಬಳಿ ಚಿರತೆ ಅಟ್ಟಹಾಸ: ಮಹದೇಶ್ವರನ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ 10 ವರ್ಷದ ಬಾಲಕ ಸಾವು!
Published on
ಚಾಮರಾಜನಗರ: ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರದಲ್ಲಿ ಚಿರತೆಯೊಂದು ಭೀಕರ ಅಟ್ಟಹಾಸ(Leopard Attack) ಮೆರೆದಿದೆ. ನಾಗಮಲೆಗೆ ತೆರಳುವ ಮಾರ್ಗಮಧ್ಯೆ ಚಿರತೆ ದಾಳಿ ನಡೆಸಿದ ಪರಿಣಾಮ 10 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ಘಟನೆಯ ವಿವರ

ಮೃತ ಬಾಲಕನನ್ನು ಬೆಂಗಳೂರು ಮೂಲದ ಹರ್ಷಿತ್ (10) ಎಂದು ಗುರುತಿಸಲಾಗಿದೆ. ಹರ್ಷಿತ್ ತನ್ನ ಕುಟುಂಬದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ, ಅಲ್ಲಿಂದ ನಾಗಮಲೆ ಕಡೆಗೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಠಾತ್ ದಾಳಿ ನಡೆಸಿದ ಚಿರತೆಯು ಬಾಲಕನನ್ನು ಹಿಡಿದು ಎಳೆದೊಯ್ದಿದೆ. ಈ ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಪೋಷಕರು ಚೀರಾಡಿದ್ದರೂ, ಅಷ್ಟರಲ್ಲೇ ಬಾಲಕ ಚಿರತೆಯ ಬಾಯಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾನೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಭೀತಿ:

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಇದೇ ಪ್ರದೇಶದಲ್ಲಿ ಚಿರತೆ ದಾಳಿಗೆ ಪಾದಯಾತ್ರಿಯೊಬ್ಬರು ಬಲಿಯಾಗಿದ್ದರು. ಆ ಘಟನೆಯ ಮಾಸುವ ಮುನ್ನವೇ ಈಗ ಬಾಲಕನೊಬ್ಬ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಮತ್ತು ಭಕ್ತಾದಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಕ್ರಂದನ ಮುಗಿಲು ಮುಟ್ಟಿದೆ

ಬಾಲಕನ ಮೃತದೇಹವನ್ನು ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ದೈವದ ದರ್ಶನಕ್ಕೆಂದು ಹರಕೆ ಹೊತ್ತು ಬಂದಿದ್ದ ಮಗ ಕಣ್ಣೆದುರೇ ಶವವಾಗಿ ಬಿದ್ದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಆಸ್ಪತ್ರೆ ಆವರಣದಲ್ಲಿ ಶೋಕದ ಛಾಯೆ ಆವರಿಸಿದೆ.

ಅರಣ್ಯ ಇಲಾಖೆಗೆ ಸಾರ್ವಜನಿಕರ ಆಗ್ರಹ

ನಾಗಮಲೆಗೆ ಹೋಗುವ ಪಾದಯಾತ್ರಿಗಳ ಸುರಕ್ಷತೆಗೆ ಅರಣ್ಯ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಈ ನರಭಕ್ಷಕ ಚಿರತೆಯನ್ನು ಕೂಡಲೇ ಸೆರೆಹಿಡಿಯಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಚಿರತೆ ದಾಳಿ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಮತ್ತು ಸೂಕ್ತ ನಾಮಫಲಕಗಳನ್ನು ಹಾಕುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net